-->
Bookmark

Naregal : ಬೀದಿ ನಾಯಿ ದಾಳಿಗೆ ಆಕಳು ಬಲಿ

Naregal : ಬೀದಿ ನಾಯಿ ದಾಳಿಗೆ ಆಕಳು ಬಲಿ

ನರೇಗಲ್ :‌ (Mar_12_2025)

ಮನೆ ಮುಂದೆ ಕಟ್ಟಲಾಗಿದ್ದ ಆಕಳಿನ ಮೇಲೆ ಬೀದಿ ನಾಯಿಗಳು  ದಾಳಿ ಮಾಡಿದ ಕಾರಣ ಗಾಯಗೊಂಡ ಆಕಳು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯ ನಿವಾಸಿ ಮಾರುತಿ ಈರಪ್ಪ ಚಳ್ಳಮರದ ಎನ್ನುವರಿಗೆ ಸೇರಿದ ಆಕಳಾಗಿದೆ. ಎಂದಿನಂತೆ ಮನೆಮುಂದಿನ ಬಯಲು ಜಾಗದಲ್ಲಿ 2 ದೊಡ್ಡ ಹಾಗೂ 2 ಸಣ್ಣ ಆಕಳುಗಳನ್ನು ಕಟ್ಟಿದ್ದರು. ಆದರೆ  ಮಂಗಳವಾರ ನಸುಕಿನ ವೇಳೆ ಆಕಳಿನ ಮೇಲೆ ದಾಳಿ ನಡೆಸಿರುವ ನಾಕ್ಲೈದು ಬೀದಿ ನಾಯಿಗಳು ಮುಂಗಾಲು, ಹಿಂಗಾಲು, ತೊಡೆ ಭಾಗ ಹಾಗೂ ಕುತ್ತಿಗೆಯ ತುಂಬ ಮಾರಣಾಂತಿಕವಾಗಿ ದಾಳಿ ಮಾಡಿ ಎಳೆದಾಡಿವೆ ಇದರಿಂದ ಗಂಭೀರವಾಗಿ ಗಾಯಗೊಂಡ  ವಯಸ್ಕ ಆಕಳು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ಮಾಲಿಕ ಕಣ್ಣೀರು ಹಾಕಿದರು. 
ಈ ಹಿಂದೆ ಇದೇ ರೀತಿ ಎರಡು ಆಕಳುಗಳ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಗಳು ದೇಹದ ಅರ್ಧಕ್ಕೂ ಹೆಚ್ಚು ಭಾಗ ಗಾಯಗೊಳಿಸಿ ಎರಡೂ ಆಕಳುಗಳನ್ನು ಸಾಯಿಸಿದ್ದವು. ಮತ್ತೇ ಇನ್ನೊಂದು ಆಕಳಿಗೂ ಹೀಗೆ ದಾಳಿ ಮಾಡಿರುವ ಕಾರಣ ಬೀದಿ ನಾಯಿಗಳ ಹಾವಳಿಗೆ ಭಯವಾಗಿದೆ. ಮಾರಿದರೆ ಕನಿಷ್ಟ ₹10 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಸಾಕುವ ರೈತರು ಖರೀದಿ ಮಾಡುತಿದ್ದರು. ಮೂರು ಆಕಳುಗಳ ಸಾವಿನಿಂದ ಅಂದಾಜು ₹40 ಸಾವಿರದಷ್ಟು ನಷ್ಟವಾಗಿದೆ ಎನ್ನುತ್ತಾರೆ ಮಾರುತಿ.
ಇಲ್ಲಿನ ಓಣಿಯಲ್ಲಿ ಚಿಕ್ಕ ಮಕ್ಕಳು ಮನೆಯ ಮುಂದೆ ಆಟವಾಡುವುದು ಸಹಜವಾಗಿರುತ್ತದೆ. ಆದರೆ ಬೀದಿ ನಾಯಿಗಳು ಸಾಕು ಪ್ರಾಣಿಗಳ ಮೇಲೆ ಪದೇ ಪದೇ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸಾಯಿಸುತ್ತಿರುವುದು ನೋಡಿದರೆ ಭಯವಾಗಿದೆ. ಬೀದಿಯಲ್ಲಿ ಆಟವಾಡುವ ಮಕ್ಕಳ ಮೇಲೂ ಹೀಗೆ ದಾಳಿ ಮಾಡಿದರೆ ಯಾರು ಹೊಣೆ ಅದಕ್ಕೆ ಸ್ಥಳೀಯ ಆಡಳಿತದವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಬೀದಿ ನಾಯಿಗಳ ಹಾವಳಿ ತಡೆಯಲು, ಸಂತಾನೋತ್ಪತ್ತಿ ತಡೆಯಲು ಹಾಗೂ ರೇಬಿಸ್‌ ಹರಡದಂತೆ ರೋಗ ನಿರೋಧಕ ಚುಚ್ಚು ಮದ್ದು ನೀಡಲು ಮುಂದಾಗಬೇಕು. ಅದರಲ್ಲೂ ರೈತರ ಒಡನಾಡಿಯಾದ ಆಕಳುಗಳನ್ನು ಕೊಲ್ಲುವ ಮೂಲಕ ರಕ್ತದ ಸವಿ ಉಂಡಿರುವ ಬೀದಿ ನಾಯಿಗಳನ್ನು ಗುರುತಿಸಿ    ಕೂಡಲೇ ನಿಯಂತ್ರಿಸಬೇಕು ಇಲ್ಲವಾದರೆ ಹೋರಟಕ್ಕೆ ಮುಂದಾಗುತ್ತೇವೆ ಎಂದು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ ಆಗ್ರಹಿಸಿದರು.
ಗೋವುಗಳನ್ನು ಸಾಕುವವರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿದೆ ಅಂತಹದರಲ್ಲಿ ಕಷ್ಟಪಟ್ಟು ಸಾಕುವವರ ಹಿತ ಕಾಯಲು ಮುಂದಾಗಬೇಕು. ಈಗಾಗಲೇ ಬೀದಿ ನಾಯಿಗಳ ದಾಳಿಗೆ ಮೂರು ಆಕಳುಗಳನ್ನು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದು ರೈತ ಮುಖಂಡ ಶರಣಪ್ಪ ಧರ್ಮಾಯತ ಆಗ್ರಹಿಸಿದರು.
Post a Comment

Post a Comment