ನರೇಗಲ್ : (Mar_11_2025)
ವಿದ್ಯಾರ್ಥಿಗಳು ಸಮುದಾಯ ಸೇವಾ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ಸಮಾಜದ ಸೇವೆ ಮಾಡಲು ಎನ್‌ಎಸ್‌ಎಸ್ ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಅದರ ಸದ್ಬಳಿಕೆಗೆ ಮುಂದಾಗಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಕಾರ್ಯಕ್ರಮದ ಯೋಜನಾಧಿಕಾರಿ ಎಂ. ಬಿ. ದಳಪತಿ ಹೇಳಿದರು. ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಮಜರೆ ಕೋಡಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರಕ್ಕೆ ಮಂಗಳವಾರ ಅನಿರಿಕ್ಷಿತ ಭೇಟಿ ನೀಡಿ ಮಾತನಾಡಿದರು.
ಸಮುದಾಯದಿಂದ ಸಮುದಾಯಕ್ಕೆ ಶಿಕ್ಷಣ ಮತ್ತು ಸೇವೆ ನೀಡಲು ಶಿಬಿರಗಳು ಸಹಕಾರಿಯಾಗಿವೆ. ರಾಷ್ಟ್ರೀಯ ಸೇವಾ ಯೋಜನೆ ಬಹಳ ಹಿಂದಿನಿಂದಲೂ ವಿದ್ಯಾರ್ಥಿಗಳ ಆತ್ಮ ಮತ್ತು ಮನಸ್ಸನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಶಿಬಿರಗಳ ಅವಶ್ಯಕತೆಯಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಯ ಜೊತೆಗೆ ಶಿಬಿರಗಳಲ್ಲಿ ಪಾಲ್ಗೊಂಡು ಸೇವಾನುಭವ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಸ್. ಎಲ್. ಗುಳೆದಗುಡ್ಡ ಮಾತನಾಡಿ, ಶಿಕ್ಷಣ ಒತ್ತಡ ಆಗಬಾರದು, ಪಠ್ಯ ಶಿಕ್ಷಣ ಜತೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಕ್ಕಾಗಿ ಶಿಬಿರಗಳು ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಯೋಜನಾಧಿಕಾರಿ ಎಂ. ಬಿ. ದಳಪತಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಎನ್ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ವಿವಿಧ ವಿಭಾಗದ ಪ್ರಾಧ್ಯಾಪಕರು ಇದ್ದರು.
Post a Comment