-->
Bookmark

Editorial : ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸೌಜನ್ಯ ಪ್ರಕರಣ, ಪತ್ರಿಕೆಗಳ ಮೌನ : ದೀನೇಶ್ ಅಮೀನ್ ಮಟ್ಟು Facebook Page ನಿಂದ

Editorial : ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸೌಜನ್ಯ ಪ್ರಕರಣ, ಪತ್ರಿಕೆಗಳ ಮೌನ :  ದೀನೇಶ್ ಅಮೀನ್ ಮಟ್ಟು Facebook Page ನಿಂದ

ಸಂಪಾದಕೀಯ : (Mar_31_2025)

ಕನ್ನಡದ ಮಾಧ್ಯಮಗಳಿಗೆ ಎರಡು ಶಬ್ದಗಳ ಬಗ್ಗೆ ಒಂದೋ, ಭಯ ಇದೆ. ಇಲ್ಲವೇ ಇವು ಬಳಕೆಯಲ್ಲಿ ಇದೆ ಎನ್ನುವ ಬಗ್ಗೆ ಅಜ್ಞಾನ ಇದೆ, ಮೊದಲನೆಯದು ಸಂತೋಷ, ಇನ್ನೊಂದು ಸೌಜನ್ಯ.

2018ರ ನಂತರದ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿರುವ ಹೆಸರು ಬಿ.ಎಲ್.ಸಂತೋಷ್ ಅವರದ್ದು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣಗಳಲ್ಲಿ ಬಿಜೆಪಿಯ ಸರಣಿ ಸೋಲುಗಳ ನಂತರವೂ ಇವರನ್ನು ಮೋದಿ ಮತ್ತು ಶಹಾ ನಂತರದ ಅತ್ಯಂತ ಪ್ರಭಾವಿ ಮತ್ತು ಬಲಾಢ್ಯ ನಾಯಕ ಎಂದು ಅವರು ಕರುನಾಡಿನ ಅಭಿಮಾನಿಗಳು ಡೋಲು ಬಾರಿಸುತ್ತಲೇ ಇರುತ್ತಾರೆ.

ರಾಜ್ಯ ಬಿಜೆಪಿಯ ಉಸ್ತುವಾರಿಯಿಂದ ಇವರನ್ನು ಹೊರಗಿಟ್ಟಿರುವ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಅವರ ಪಾತ್ರ ಕಾಣಿಸದೆ ಇದ್ದರೂ ತೆರೆಯಮರೆಯಲ್ಲಿ ಅವರು  ದಾಳಗಳನ್ನು ಜೊತೆಯಲ್ಲಿ ತಲೆಗಳನ್ನು ಉರುಳಿಸುತ್ತಲೇ ಇದ್ದಾರೆ. ಈ ಉರುಳಿಸುವ ಆಟಕ್ಕೆ ಮೊದಲು ಬಲಿಯಾದವರು ಬಿ.ಎಸ್.ಯಡಿಯೂರಪ್ಪ, ಎರಡನೆಯವರು ಕೆ.ಎಸ್.ಈಶ್ವರಪ್ಪ ಈಗ  ಬಸವನಗೌಡ ಪಾಟೀಲ್ ಯತ್ನಾಳ್.

 2013ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ತನ್ನ ನಿರ್ಗಮನಕ್ಕೆ ಸಂತೋಷ್ ಅವರೇ ಕಾರಣ ಎಂದು ಯಡಿಯೂರಪ್ಪನವರು ಬಹಿರಂಗವಾಗಿ ಹೇಳಿದ್ದರು. ಉಳಿದಿಬ್ಬರು ಇಲ್ಲಿಯ ವರೆಗೆ ಬಹಿರಂಗವಾಗಿ ಅವರ ಹೆಸರು ಎತ್ತಿಲ್ಲ. ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್. ಸ್ಥಾಪನೆ ಮತ್ತು ಕುರುಬರನ್ನು ಎಸ್ ಟಿ ಪಂಗಡಕ್ಕೆ ಸೇರ್ಪಡೆಯ ಹುನ್ನಾರದ ಹಿಂದೆ  ಸಂತೋಷ್ ಅವರದ್ದೇ ಮೆದುಳು ಕೆಲಸ ಮಾಡಿದೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಭಯಪಡುವ ಬಿಜೆಪಿ ನಾಯಕರು.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮೋದಿಯಂತಹ ಮೋದಿ, ಶಹಾನಂತಹ ಶಹಾ ಅವರಿಗೆ ಕೂಡಾ ಸೊಪ್ಪು ಹಾಕದೆ, ಶಿಸ್ತು ಕ್ರಮದ ಬೆದರಿಕೆಗೆ ಕೂಡಾ ಜಗ್ಗದೆ ತಂದೆ-ಮಗನ ವಿರುದ್ದ ವಾಗ್ದಾಳಿಯನ್ನು ಮುಂದುವರಿಸಲು ಕೂಡಾ ಸಂತೋಷ್ ಅವರ ಕೃಪಕಟಾಕ್ಷವೇ ಕಾರಣ ಎನ್ನುವ ಸಂಗತಿಯೂ ಗುಟ್ಟಾಗಿ ಉಳಿದಿಲ್ಲ. ಆದರೆ ಶಿಷ್ಯರು ದುಸ್ಸಾಹಸ ನಡೆಸಿ ಕಷ್ಟಕ್ಕೆ ಸಿಲುಕಿಕೊಂಡಾಗ ಸಂತೋಷ್ ಅವರು ನೆರವಿಗೆ ಧಾವಿಸಿದ್ದ ಉದಾಹರಣೆ ಇಲ್ಲ.

ಹೀಗಿದ್ದರೂ ಯಾರನ್ನೋ ಮಾತು ಕೇಳಿ ತಮ್ಮ ರಾಜಕೀಯ ಜೀವವನ್ನು ಕಳೆದುಕೊಂಡ ಈಶ್ವರಪ್ಪನವರು ಮತ್ತು  ಅದೇ ಹಾದಿಯಲ್ಲಿರುವ ಯತ್ನಾಳ್ ಇಲ್ಲಿಯ ವರೆಗೆ ಸಂತೋಷ್ ಅವರ ವಿರುದ್ದ ಸೊಲ್ಲೆತ್ತಿಲ್ಲ. ಇದೇನು ಹೆದರಿಕೆಯೇ? ಅಜ್ಞಾನವೋ ? ಇಲ್ಲವೇ ಮಾಯೆಯೋ ಎನ್ನುವುದನ್ನು ಅವರೇ ಮುಂದೊಂದು ದಿನಹೇಳಬಹುದು.

ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ದ ಬಿಜೆಪಿಯೊಳಗಿನ ಯಾವ ನಾಯಕರು ತಲೆ ಎತ್ತಿದ್ದರೂ ಆ ತಲೆಗಳ ಮೇಲೆ ಸಂತೋಷ್ ಅವರ ಕೈ ಇರುತ್ತದೆ ಎನ್ನುವ ಅಭಿಪ್ರಾಯ ಬಿಜೆಪಿ ವಲಯದಲ್ಲಿ ಜನಜನಿತ. 

ಆದರೆ ನಮ್ಮ ಮಾಧ್ಯಮಮಿತ್ರರಿಗೆ  ಮಾತ್ರ ಈ ಕಾಣದ ಕೈ ಬಗ್ಗೆ ಒಂದು ರೀತಿಯ ಕುರುಡು ಮತ್ತು ಕಿವುಡು. ಯತ್ನಾಳ್ ಉಚ್ಚಾಟನೆಯ ನಂತರದ ಪತ್ರಿಕೆಗಳಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಾಗಲಿ, ಟಿವಿಗಳಲ್ಲಿ ನಡೆದ ಚರ್ಚೆಯಲ್ಲಾಗಲಿ ಸಂತೋಷ್ ಅವರ ಹೆಸರು ಪ್ರಸ್ತಾಪವಾಗಿಯೇ ಇಲ್ಲ. ಏನ್ ಭಯ ಗುರು!

ಇನ್ನು ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೂಡಾ ಕನ್ನಡ ಮಾಧ್ಯಮಗಳ ನಿರಾಸಕ್ತಿ ಮತ್ತು ಭಯ ಕಣ್ಣಿಗೆ ರಾಚುತ್ತಿದೆ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪತ್ರಕರ್ತರೊಬ್ಬರು ರಾಜಕಾರಣಿಗಳ ಹನಿಟ್ರಾಪ್ ಬಗ್ಗೆ ಬರೆಯುತ್ತಾ ಸೌಜನ್ಯಳ ವಿಷಯ ಪ್ರಸ್ತಾಪವಾದ ಕೂಡಲೇ ಆ ಹೆಸರನ್ನು ಇನ್ ವರ್ಟೆಡ್ ಕಾಮಾಗಳ ನಡುವೆ ಹಾಕಿಬಿಟ್ಟಿದ್ದರು. ಯಾಕೆ ಸ್ವಾಮಿ ಇಷ್ಟೊಂದು ಭಯ?
Post a Comment

Post a Comment