ಗಜೇಂದ್ರಗಡ : (Feb_27_2025)
ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮೂಲಕ ದೇಶವನ್ನೇ ಬಂಡವಾಳಶಾಹಿಗಳ ಕೈಗೊಪ್ಪಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಸಿಐಟಿಯು ಜಿಲ್ಲಾ ಮುಖಂಡ
ಪೀರು ರಾಠೋಡ್ ಆರೋಪಿಸಿದರು.
ನಗರದ ಕೆ.ಕೆ.ವೃತ್ತದಲ್ಲಿ ಸಿಐಟಿಯು ಸಂಯೋಜಿತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ್ 3 ರಿಂದ ನಡೆಯಲಿರುವ ರಾಜ್ಯಮಟ್ಟದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸರ್ಕಾರದ ಈ ನಿರ್ಧಾರ ಕೇವಲ ಉದ್ಯಮಗಳ ಪರವಾಗಿದೆ. ಕಾರ್ಮಿಕರ ಪರವಾಗಿಲ್ಲ. ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕಾನೂನಿಂದ ಕೈಗಾರಿಕೆಗಳು ಪ್ರತಿ ಘಟಕವನ್ನು ಸ್ವತಂತ್ರ ಕಾರ್ಖಾನೆ ಎಂದು ತೋರಿಸಲು ಮತ್ತು ಯಾವುದೇ ಭಯವಿಲ್ಲದೆ ಕಾರ್ಮಿಕರನ್ನು ವಜಾಗೊಳಿಸಲು, ಅನುವು ಮಾಡಿಕೊಟ್ಟಂತಾಗಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ಸಿಐಟಿಯ ಮುಖಂಡ ಮೆಹಬೂಬ್ ಹವಾಲ್ದಾರ್ ಮಾತನಾಡಿ,
ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ 500 ಕೋಟಿ ಮೀಸಲಿಡುವ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿ, ಅವರ ಹಿತ ಕಾಯಲು ಮುಂದಾಗಬೇಕು. ಈ ಹೋರಾಟದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆ, ಗ್ರಾಮ ಪಂಚಾಯತ್, ಹೊರಗುತ್ತಿಗೆ, ಗುತ್ತಿಗೆ ಸೇರಿದಂತೆ ಅಸಂಘಟಿತ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಮಟ್ಟದ ಈ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುತ್ತಿದ್ದು, ಸಿಐಟಿಯು ಸಂಯೋಜಿತ ಸಂಘಟನೆಗಳು ಪಾಲ್ಗೊಳ್ಳುತ್ತಿವೆ.
ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುವ ಈ ಹೋರಾಟಕ್ಕೆ
ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು, ಹೊರಗುತ್ತಿಗೆ ನೌಕರರು, ಗ್ರಾಮ ಪಂಚಾಯತಿ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಈ ವೇಳೆ ಕೃಷಿಕೂಲಿಕಾರರ ಸಂಘಟನೆ ಮುಖಂಡ ಬಾಲು ರಾಠೋಡ್, ಅಂಬರೇಷ ಚವ್ಹಾಣ್, ಅನ್ವರಭಾಷ ಕೊಪ್ಪಳ, ಕಳಕೇಶ್ ಮಾಳೋತ್ತರ್, ಚನ್ನಪ ಹೂಗಾರ್, ನೀಲವ್ವ ಅಜಮೀರ್, ಮಾರುತಿ ಹೂಗಾರ್, ರವಿಕುಮಾರ್ ಹೂಗಾರ್, ಮುತ್ತಮ್ಮ ಹೂಗಾರ್, ವೀರೇಶ್ ಹೂಗಾರ್, ಗೌರಮ್ಮ ಹೂಗಾರ್,
ಸೇರಿದಂತೆ ವಿವಿಧ ವಲಯದ ಮುಖಂಡರು ಪಾಲ್ಗೊಂಡಿದ್ದರು.
Post a Comment