ಸಂಪಾದಕೀಯ : (Feb_27_2025)
ಸ್ಥಳೀಯ ಸಂಸ್ಥೆ ಚುನಾವಣೆಗೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರ ರಾಜ್ಯ ಚುನಾವಣಾ ಆಯೋಗದ ಬಳಿ ಇಲ್ಲ. ರಾಜ್ಯ ಸರ್ಕಾರ ಈ ಎರಡು ಪ್ರಕ್ರಿಯೆಗಳನ್ನ ಪೂರ್ಣಗೊಳಿಸಬೇಕು. ರಾಜ್ಯ ಸರ್ಕಾರ ಈ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಲು ಇಚ್ಛಾಶಕ್ತಿ ಕೊರತೆ ರಾಜ್ಯದ ಜನರಿಗೆ ಮನವರಿಕೆಯಾಗಿದೆ. ಕಳೆದ 4 ವರ್ಷದಿಂದ ಈ ಕಾರ್ಯ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸರ್ಕಾರಗಳು ಮಾಡಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಾವ ಸಂಧರ್ಭದಲ್ಲಾದರೂ , ಚುನಾವಣೆ ಎದುರಾಗಬಹುದು ಕಾರ್ಯಕರ್ತರು ಸನ್ನದ್ಧರಾಗಿ ಎಂದು ಹೇಳಿದ್ದಾರೆ.
ಇದಕ್ಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಹೈಕೋರ್ಟ್‌ಲ್ಲಿ ಫೆ.17ರಂದು ನಡೆದು, 'ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು' ಎಂದು ಚುನಾವಣಾ ಆಯೋಗ ತಿಳಿಸಿದೆ. ಸರ್ಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, 'ಮೇ ತಿಂಗಳೊಳಗೆ ಮೀಸಲಾತಿ ನೀಡುವುದಾಗಿ ಸ್ಪಷ್ಟಪಡಿಸಿ, ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುವುದು. ಜೂನ್ ಅಥವಾ ಜುಲೈ ತಿಂಗಳಲ್ಲಿ ಚುನಾವಣೆ ಆಯೋಗ, ಚುನಾವಣೆಗಳನ್ನು ನಡೆಸಬಹುದು' ಎಂದಿದ್ದಾರೆ. ಹೀಗೆ, ಹೇಳಿದಂತೆ ಎಲ್ಲವೂ ನಡೆದರೇ, ಆಗಷ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಈಗ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಆಕಾಂಕ್ಷಿಗಳ ದಂಡೆ ಇದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಚುನಾವಣೆಯಲ್ಲಿ ಟಿಕೇಟ್ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಅತ್ತಿಂದಿತ್ತ, ಇತ್ತಿಂದತ್ತ ಪಲಾಯನ ಮಾಡುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ನಲ್ಲಿ ತಂಡೋಪ ತಂಡವಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಲವರು ತಾವೇ ಜಿ.ಪಂ ಅಭ್ಯರ್ಥಿ ಎಂದು ತಮ್ಮ ತಮ್ಮ ಆಪ್ತರಲ್ಲಿ ಹೇಳಿಕೊಂಡು, ಟಿಕೇಟ್ ನನಗೆ ಸಿಗಲಿದೆ. ಟಿಕೇಟ್ ಸಿಗಲು ಏನೇನೂ ಮಾಡಬೇಕೆಂದು ಚರ್ಚೆ ನಡೆಸಿ, ಅದರಂತೆ ಕೆಲಸ ಕಾರ್ಯವನ್ನ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಗೆ ನಿಂತರೂ ಗೆಲ್ಲದವರೂ, ಇಂದು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಮುಂಚೂಣಿಯಲ್ಲಿ ನಿಂತು, ಶಾಸಕರ ಆಪ್ತರನ್ನ ತಮ್ಮತ್ತ ಸೆಳೆಯುವ ಕೆಲಸ ಕಾರ್ಯಗಳು ಜೊರಾಗಿ ನಡೆದಿವೆ. ಸರಿ ಸುಮಾರು 40_50 ವರ್ಷದಿಂದ ರಾಜಕೀಯದ ಅನುಭವ ಹೊಂದಿರುವ ಶಾಸಕರು ಮತ್ತು ನಿಗಮ ಮಂಡಳಿ ಅಧ್ಯಕ್ಷರಾದ ಜಿ.ಎಸ್ ಪಾಟೀಲ್ ಅವರು, ಯಾರಿಗೆ ಯಾವ ಕ್ಷೇತ್ರ ಕೊಡುತ್ತಾರೆ ಎಂಬುದನ್ನ ಅಭ್ಯರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಬಾರಿ ಸಚಿವ ಸಂಪುಟ ಪುನಾರಚನೆಯಾದ್ರೆ, ಸಚಿವರಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯನವರ ನಡೆ, ಮತ್ತು ಜಿ.ಎಸ್ ಪಾಟೀಲರು ಕ್ಷೇತ್ರದಲ್ಲಿ ವರ್ಷಸ್ಸು ಸ್ಥಾಪಿಸಿ, ಮತ್ತೆ ಚುನಾವಣೆಗೆ ಸನ್ನದ್ಧರಾಗಬೇಕಿದೆ.
ಇದೆಲ್ಲದರ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ಪ್ರಕಟಣೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ತಮಗೆ ಟಿಕೇಟ್ ಸಿಗದಿದ್ದಲ್ಲಿ ಮತ್ತೆ ಬಿಜೆಪಿ ಯತ್ತ ಘರ್ ವಾಪ್ಸಿ ಮಾಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.
Post a Comment