ನರೇಗಲ್ಲ : (Jan_10_2025) ಗಜೇಂದ್ರಗಡದಲ್ಲಿ ಇದೇ ತಿಂಗಳ 20 ಮತ್ತು 21ರಂದು ನಡೆಯಲಿರುವ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಗಜೇಂದ್ರಗಡ ತಾಲ್ಲೂಕು ಕಸಾಪ ಅಧ್ಯಕ್ಷ ಅಮರೇಶ ಪಿ. ಗಾಣಗೇರ ಮತ್ತು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಇವರುಗಳ ಏಕಮುಖ ನಡೆಯನ್ನು, ನಿರ್ಲಕ್ಷ್ಯ ಧೋರಣೆಯನ್ನು ನರೇಗಲ್ಲ ಹೋಬಳಿ ಕಸಾಪ ಘಟಕವು ತೀವ್ರವಾಗಿ ಖಂಡಿಸಿದೆ.
ನರೇಗಲ್ಲ ಹೋಬಳಿ ಘಟಕದ ಅಧ್ಯಕ್ಷ ಎಂ. ವಿ. ವೀರಾಪುರ ಅವರ ನಿವಾಸದಲ್ಲಿ ಬುಧವಾರ ಸಂಜೆ ಸಭೆ ಸೇರಿದ್ದ ನರೇಗಲ್ಲ ಹೋಬಳಿ ಕಸಾಪದ ಆಜೀವ ಸದಸ್ಯರು ಈ ಖಂಡನೆಯನ್ನು ಮಾಡಿದರು.
ಹಿರಿಯ ಸಾಹಿತಿ ಎಂ. ಎಸ್. ದಢೇಸೂರಮಠ ಮಾತನಾಡಿ ಈಚೆಗೆ ಬಿಡುಗಡೆ ಮಾಡಲಾದ ಜಿಲ್ಲಾ ಕಸಾಪದ ಮಾಹಿತಿಯ ಪ್ರಕಾರ ಜ. 19ರಂದು ತಾಯಿ ಭುವನೇಶ್ವರಿ ಮೆರವಣಿಗೆಯನ್ನು ಕರ್ನಾಟಕ ಏಕೀಕರಣದ ರೂವಾರಿ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಪ್ರಾರಂಭಿಸಿ, ನರೇಗಲ್ಲ ಮಾರ್ಗವಾಗಿ ಗಜೇಂದ್ರಗಡ ಪಟ್ಟಣದವರೆಗೆ ನಡೆಸಲಾಗುವುದೆಂದು ತಿಳಿಸಿದೆ. ಆದರೆ ಈ ಕುರಿತು ಜಿಲ್ಲಾಧ್ಯಕ್ಷರಾಗಲಿ, ತಾಲೂಕಾ ಅಧ್ಯಕ್ಷರಾಗಲಿ, ನರೇಗಲ್ಲ ಹೋಬಳಿ ಘಟಕದ ಅಧ್ಯಕ್ಷರನ್ನಾಗಲಿ ಅಥವಾ ಯಾವುದೇ ಸದಸ್ಯರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡಿರುವುದನ್ನು ಸಭೆಯು ಬಲವಾಗಿ ಖಂಡಿಸುತ್ತದೆ ಎಂದರು.
ಬೀಚಿ ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ ಮಾತನಾಡಿ ನರೇಗಲ್ಲದಲ್ಲಿ ಅನೇಕ ಸಾಹಿತ್ತಿಕ ಸಂಘಟನೆಗಳಿವೆ. ಈ ಸಂಘಟನೆಗಳಲ್ಲಿರುವ ಬಹುತೇಕರು ಕಸಾಪದ ಸದಸ್ಯರುಗಳೆ ಆಗಿದ್ದಾರೆ. ಹೀಗಿರುವಾಗ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಬ್ಬರೂ ಅಧ್ಯಕ್ಷರು ನಡೆದುಕೊಳ್ಳುತ್ತಿರುವ ರೀತಿ ಎಲ್ಲರ ಮನಸ್ಸಿಗೆ ನೋವನ್ನುಂಟು ಮಾಡಿದೆ ಎಂದರು.
ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ. ಎ. ಅರವಟಗಿಮಠ ಮಾತನಾಡಿ ಜಿಲ್ಲಾ ಅಧ್ಯಕ್ಷರು ಎಂದಿನಿಂದಲೂ ನರೇಗಲ್ಲ ಹೋಬಳಿ ಘಟಕವನ್ನು ನಿರ್ಲಕ್ಷಿಸುತ್ತಲೆ ಬಂದಿದ್ದಾರೆ. ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ಇಬ್ಬರೂ ಅಧ್ಯಕ್ಷರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ಮಾಡುತ್ತಾರೆ ಎಂಬುದು ನಮಗೆ ತಿಳಿದಿರಲಿಲ್ಲ ಎಂದರು.
ಹೋಬಳಿ ಘಟಕದ ಅಧ್ಯಕ್ಷ ಎಂ. ವಿ. ವೀರಾಪೂರ ಮಾತನಾಡಿ ಜಿಲ್ಲಾ ಅಧ್ಯಕ್ಷರ ಚುನಾವಣೆಯಿಂದಲೂ ಅವರ ಎಲ್ಲ ಕಾರ್ಯಗಳನ್ನೂ ನರೇಗಲ್ಲ ಕಸಾಪ ಬೆಂಬಲಿಸುತ್ತಲೆ ಬಂದಿದೆ. ಜಿಲ್ಲಾ ಸಮ್ಮೇಳನದಂತಹ ಸಂದರ್ಭದಲ್ಲಿ ಇಬ್ಬರೂ ಅಧ್ಯಕ್ಷರುಗಳು ನರೇಗಲ್ಲ ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನೀಯ. ಆದ್ದರಿಂದ ಅನಿವಾರ್ಯವಾಗಿ ನಾವು ಖಂಡಿಸಬೇಕಿದೆ. ಇನ್ನಾದರೂ ಅವರು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ಡಾ. ಆರ್. ಕೆ. ಗಚ್ಚಿನಮಠ, ತಾಲೂಕಾ ಕಸಾಪ ಕಾರ್ಯದರ್ಶಿ ಬಿ. ಬಿ. ಕುರಿ, ಎಂ. ಕೆ. ಬೇವಿನಕಟ್ಟಿ, ವಿ. ವಿ. ಅಣ್ಣಿಗೇರಿ ಅರುಣ ಬಿ. ಕುಲಕರ್ಣಿ, ಬಿ. ಟಿ. ತಾಳಿ, ಸೇರಿದಂತೆ ಇನ್ನೂ ಅನೇಕರಿದ್ದರು.
Post a Comment