ಗಜೇಂದ್ರಡದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಗುರುಕೃಪಾ ಕಾರ್ಯಕ್ರಮ
ಗಜೇಂದ್ರಗಡ : (Jan_29_2025)
ವಿದೇಶಗಳಲ್ಲಿ ಅಧ್ಯಾತ್ಮಕ್ಕೆ ಒಂದು ದಿನ, ಒಂದು ವಾರವೆಂದು ಮೀಸಲಿದ್ದರೆ ಭಾರತೀಯರ ಎಲ್ಲಾ ಸಂಸ್ಕೃತಿಯಲ್ಲಿ, ನಿತ್ಯ ವ್ಯವಹಾರದಲ್ಲಿ ಅಧ್ಯಾತ್ಮ ಅಡಗಿದೆ ಹಾಗಾಗಿ ಭಾರತವು ಜಗತ್ತಿನಲ್ಲಿಯೇ ಶ್ರೇಷ್ಠ ದೇಶವಾಗಿದೆ ಎಂದು ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಸಂಜೆ ನಡೆದ 2024-25ನೇ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಗುರುಕೃಪಾ-2025 ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರು ಎಂದರೆ ಅಜ್ಞಾನ ನಿವಾರಕ, ಕತ್ತಲೆಯಿಂದ ನೆಳಕಿನಡೆಗೆ ಕರೆದುಕೊಂದು ಹೋಗುವ ಸಾಧಕನಾಗಿದ್ದಾನೆ. ನಮ್ಮ ಅರಿವು ನಮಗೆ ಮಾರ್ಗದರ್ಶನ ನೀಡಿದರೆ ಅದೇ ಗುರುವಾಗಿದೆ. ಶಿಕ್ಷಣದ ಜೊತೆಗೆ ಸಮಾಜದಲ್ಲಿ ನಮ್ಮ ಕರ್ತವ್ಯವೇನು, ನೈತಿಕ ಹೊಣೆ ಏನು ಎಂಬುದು ಗೊತ್ತಿರಬೇಕು ಆದ್ದರಿಂದ ಶಿಕ್ಷಣ ಪಡೆಯುವ ಪ್ರತಿ ವಿದ್ಯಾರ್ಥಿಯು ಮಾನವೀಯ ಸಾಮಾನ್ಯ ಗುಣಗಳನ್ನು ಹೊಂದಬೇಕು ಎಂದರು. ಗುಣಮಟ್ಟದ ಶಿಕ್ಷಣವನ್ನು ಪಡೆಯಲು ದೂರದ ಮಂಗಳೂರು, ಬೆಂಗಳೂರಿಗೆ ಅವಶ್ಯಕತೆ ಇಲ್ಲ. ನಮ್ಮ ಶ್ರೀಮಠದ ಸಂಸ್ಥೆಯಿಂದ ಸ್ಥಳೀಯವಾಗಿಯೇ ಕೊಡುತ್ತಿದ್ದೇವೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಚೇರಮನ್ನ ವಿ. ವಿ. ವಸ್ತ್ರದ, ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಂಡು ಕಾಲೇಜಿನ ಹಾಗೂ ತಂದೆತಾಯಿಗಳ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಕಳೆದ ವರ್ಷ ನಮ್ಮ ಕಾಲೇಜು ಜಿಲ್ಲಾಮಟ್ಟದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಈ ಬಾರಿ ಉಪನ್ಯಾಸಕರು, ವಿದ್ಯಾರ್ಥಿಗಳು ಪರೀಕ್ಷೆಗೆ ತಕ್ಕ ಯೋಜನೆ ಸಿದ್ಧಪಡಿಸಿ ಕಾರ್ಯನಿರ್ವಹಿಸಬೇಕು ಹಾಗೂ ರಾಜ್ಯಮಟ್ಟದ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಬೆಳಗಾವಿಯ ಸಾಹಿತಿ ಡಾ. ರಾಜಶೇಖರ ಬಿರಾದಾರ, ವಿದ್ಯಾರ್ಥಿ ದಿಸೆಯಲ್ಲಿ ಪಡೆಯುವ ಜ್ಞಾನವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯವಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು ಹಾಗೂ ಉತ್ತಮ ನಡವಳಿಕೆಗಳನ್ನು ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಹೊಸತನದ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು, ವಿವಿಧ ವಿಭಾಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಶೈಕ್ಷಣಿಕ ಸಲಹೆಗಾರರಾದ ಬಿ. ಎಸ್. ಗೌಡರ, ಶಿವಾನಂದ ಮಠದ, ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ಕರಡಿ, ಮುದಕಪ್ಪ ತೊಂಡಿಹಾಳ, ನರೇಗಲ್ ಎಸ್. ಎ. ಪಿಯು ಕಾಲೇಜಿನ ಚೇರಮನ್ನರಾದ ಎಂ. ಜಿ. ಸೋಮನಕಟ್ಟಿ, ಕಿವುಡ ಮಕ್ಕಳ ವಸತಿಯುತ ಶಾಲೆಯ ಚೇರಮನ್ನರಾದ ಎಸ್. ಕೆ. ರೇವಡಿ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ನರಾದ ಪಿ. ಎನ್. ಚವಡಿ, ಐಟಿಐ ಕಾಲೇಜಿನ ಚೇರಮನ್ನರಾದ ಎಸ್. ಸಿ. ಚಕ್ಕಡಿಮಠ, ಕುಮಾರೇಶ್ವರ ವಾಣಿಜ್ಯ ಪದವಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಂ. ಬಿ. ಪಾಟೀಲ, ಪ್ರಾಚಾರ್ಯ ಬಿ. ಎಸ್. ಹಿರೇಮಠ ಇದ್ದರು.
Post a Comment