-->
Bookmark

Article : ಅಮ್ಮ ಕಲಿಸಿದ ಪಾಠ

Article : ಅಮ್ಮ ಕಲಿಸಿದ ಪಾಠ (Jan_28_2025)

ನನ್ನಮ್ಮನ ಗೈರು ಹಾಜರಿಯಲ್ಲಿ ಆಕೆಯ ಕುರಿತು ಆಕೆಯ ಸ್ನೇಹಿತರ ಬಳಗ ಗುಸು ಗುಸು  ಮಾತನಾಡುತ್ತಿತ್ತು. ಅವರಿಗರಿವಿಲ್ಲದೆ ಕೋಣೆಯೊಳಗೆ ಪ್ರವೇಶಿಸಿದ ಅಮ್ಮನ ಕಿವಿಗೂ ಆ ಮಾತುಗಳು ಬಿದ್ದಾಗ ಆಕೆಯ ಮುಖದಲ್ಲಿ ನಿರ್ಲಿಪ್ತಿಯ ಭಾವ. ಒಂದು ಬಾರಿ ತನ್ನ ತಲೆಯನ್ನು ಕೊಡವಿ ನನ್ನಮ್ಮ ಅಲ್ಲಿಂದ ಕಾಲ್ತೆಗೆದಳು.

 ಮತ್ತೊಬ್ಬ ಸ್ನೇಹಿತೆ ತನ್ನ ಬೆನ್ನ ಹಿಂದೆ ತನ್ನ ಕುರಿತು ಹೀಗೆಯೇ  ಮಾತನಾಡುವುದನ್ನು ಅಮ್ಮ ಅರಿತಿದ್ದಳು. ಹಾಗೆ ಆಕೆ ಮಾತನಾಡುವುದು ತನಗೆ ಗೊತ್ತಿದೆಯೆಂದು ಎಂದೂ ಅಮ್ಮ ತೋರಗೋಡಲಿಲ್ಲ. ಒಂದೆರಡು ಬಾರಿ ಈ ರೀತಿ ಪುನರಾವರ್ತನೆಯಾದಾಗ ನನ್ನಮ್ಮ ಆಕೆಯಿಂದ ನಿಧಾನವಾಗಿ ದೂರ ಸರಿದರು.

 ಮತ್ತೆ ಕೆಲ ಕುಟುಂಬದ ಸಂಬಂಧಿಗಳು ಮುಂದೊಂದು ಹಿಂದೊಂದು ಮಾತನಾಡಿದಾಗ ಕೂಡ ಆಕೆ ನಿಧಾನವಾಗಿ ಅವರಿಂದ ದೂರ ಸರಿದಳು... ಇದು ಆಕೆ ತನ್ನ ಆತ್ಮಸಾಕ್ಷಿಗೆ ಕೊಟ್ಟ ಗೌರವವಾಗಿತ್ತು... ಯಾವುದೇ ತಪ್ಪನ್ನು ತಾನು ಮಾಡದೇ ಇದ್ದಾಗಲೂ ಕೂಡ  ತನ್ನನ್ನು ನೋಯಿಸುವವರಿಂದ ದೂರ ಸರಿಯುವ ಮೂಲಕ ಆಕೆ ತನ್ನ ಆತ್ಮಗೌರವವನ್ನು ಕಾಪಾಡಿಕೊಂಡಿದ್ದಳು.. ತನಗಾಗಿ ಒಂದು ಸೇತುವೆಯನ್ನು ದಾಟಲಾಗದ ಜನರಿಗಾಗಿ ಆಕೆ ಸಮುದ್ರವನ್ನು ದಾಟಬಾರದು ಎಂದು ನಿರ್ಧರಿಸಿದ್ದ ನನ್ನಮ್ಮ ಹೀಗೆ ದೂರ ಸರಿಯುವಾಗ ಮತ್ತೊಮ್ಮೆ ತಲೆಕೊಡವಿ ನಸುನಗುತ್ತಾ ಹಿಂದೆ ಸರಿದಳು.

 ಅದು ಹೇಗೆ ಆಕೆ ಅಷ್ಟೊಂದು ಗಂಭೀರವಾಗಿ ತನ್ನ ಕುರಿತು ಕೆಟ್ಟದಾಗಿ ಮಾತನಾಡಿದ ಸ್ನೇಹಿತ ವರ್ಗ ಮತ್ತು ಸಂಬಂಧಿಗಳಿಂದ ದೂರ ಸರಿದಳು ಎಂಬ ಕುತೂಹಲ ನನಗೆ ಇದ್ದೇ ಇತ್ತು. ಈ ಕುರಿತು ನಾನು ಆಕೆಯನ್ನು ಪ್ರಶ್ನಿಸಿದಾಗ ಆಕೆಯ ಉತ್ತರ  ಸರಳವಾಗಿದ್ದರೂ ಅತ್ಯಂತ ಸ್ಪಷ್ಟವಾಗಿತ್ತು. 
 'ಜೀವನದ ಪ್ರತಿಯೊಂದು ತಿರುವಿನಲ್ಲಿ ನಮ್ಮೊಂದಿಗೆ ಯಾರು ನಡೆಯುತ್ತಾರೆ ಮತ್ತು ಯಾರು ನಡೆಯಬೇಕು ಎಂಬುದರ ನಿರ್ಧಾರ ನಮ್ಮ ಕೈಯಲ್ಲಿ ಇರುತ್ತದೆ. ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುವುದು ಅತ್ಯಂತ ಅವಶ್ಯಕ'  ಎಂದು.

 'ನಮಗೆ ಅವಹೇಳನ ಮಾಡಿದವರು, ಮೋಸ ಮಾಡಿದವರೊಂದಿಗೆ ಕೋಪಗೊಳ್ಳುವುದರಲ್ಲಿ ಅರ್ಥವಿಲ್ಲ! ಬದಲಾಗಿ ಅಂತವರಿಂದ ನಿಧಾನವಾಗಿ ದೂರ ಸರಿದು ಅಲ್ಲಿ ಖಾಲಿಯಾದ ಸ್ಥಳದಲ್ಲಿ ಅತ್ಯಂತ ನಂಬುಗೆಯ, ಪ್ರೀತಿ ಪಾತ್ರ ಜನರ ಸಹವಾಸವನ್ನು ಹೊಂದಬೇಕು' ಎಂಬ ಬದುಕಿನ ಅತಿ ದೊಡ್ಡ ಪಾಠವನ್ನು ನನ್ನಮ್ಮ ನನಗೆ ಕಲಿಸಿದಳು.

 ನಿಜ ಅಲ್ವಾ ಸ್ನೇಹಿತರೆ... ಅಮ್ಮ ಹೇಳುವ ಪ್ರತಿಯೊಂದು ಮಾತು ಅಕ್ಷರಶಃ ಸತ್ಯ.
ಎಷ್ಟೋ ಬಾರಿ ಚಿಕ್ಕಂದಿನಿಂದ ಜೊತೆಯಾಗಿ ಇದ್ದೇವೆ ಎಂಬುದೊಂದು ಕಾರಣವನ್ನು ಇಟ್ಟುಕೊಂಡು ಬೇರೆಯವರು ನಮ್ಮನ್ನು ಕೀಳಾಗಿ ನೋಡಿದರೂ ಕೂಡ ಅವರನ್ನು ಸಹಿಸುವುದು, ಹಾಗೆ ಸಹಿಸುವ ಮೂಲಕ ನಾವು ಸ್ನೇಹಕ್ಕೆ ಬೆಲೆ ಕೊಡುತ್ತಿದ್ದೇವೆ ಎಂಬ ಸ್ವಾನುಕಂಪವನ್ನು ಹೊಂದುವುದು ಎಷ್ಟರ ಮಟ್ಟಿಗೆ ಸರಿ. ಪದೇ ಪದೇ ನಮ್ಮನ್ನು ಹಂಗಿಸುವವರು ಅವಮಾನ ಮಾಡುವವರು ನಮ್ಮ ಸುತ್ತ ಇದ್ದಾಗ ನಾವು ಈ ವಿಷಯಗಳೆಡೆ ಗಮನ ಹರಿಸಲೇಬೇಕು.

 ನಮ್ಮವರು ನಮ್ಮ ಕುರಿತು ನಮ್ಮ ಅನುಪಸ್ಥಿತಿಯಲ್ಲಿ 
 ಮಾತನಾಡುವಾಗ ಆ ಮಾತಿನಲ್ಲಿರುವ ಸತ್ಯ ಮಿಥ್ಯಗಳ
 ಅವಲೋಕನ ಮಾಡಬೇಕು. ತಪ್ಪಿದ್ದರೆ ಅದನ್ನು ತಿದ್ದಿಕೊಳ್ಳುವ ಮೂಲಕ ನಮ್ಮಲ್ಲಿ ಸಕಾರಾತ್ಮಕ  ಬದಲಾವಣೆಯನ್ನು ತರಬೇಕು. 
ನಮ್ಮದೇನೂ ತಪ್ಪಿಲ್ಲದೆ ಇದ್ದಾಗಲೂ ತಮ್ಮ ಬಾಯಿ ತೀಟೆಗೆ ಹಾಗೆ ಮಾತನಾಡಿದರೆ ನಮ್ಮ ನಡವಳಿಕೆಯ ಮೂಲಕ ಅವರ ಗ್ರಹಿಕೆ ತಪ್ಪು ಎಂಬ ಅರಿವನ್ನು ಅವರಲ್ಲಿ ಮೂಡಿಸಬೇಕು.
ಮೂರನೆಯದಾಗಿ ನಮ್ಮ ತಪ್ಪಿಲ್ಲದೆ ಇದ್ದಾಗಲೂ ಕೂಡ ಅವರು ನಮ್ಮನ್ನು ಹೀಗೆಯೇ ಖಂಡಿಸುತ್ತಿದ್ದರೆ, ನಮ್ಮನ್ನು ಅವಹೇಳನ ಮಾಡುವುದೇ ಅವರ ಪರಮ ಉದ್ದೇಶವಾಗಿದ್ದಲ್ಲಿ ಅವರಿಂದ ನಿಧಾನವಾಗಿ ದೂರ ಸರಿಯಬೇಕು.

 ನಮ್ಮನ್ನು ಅವಹೇಳನ ಮಾಡುವವರು, ನಮ್ಮ ಬೆನ್ನ ಹಿಂದೆ ಮಾತನಾಡುವವರೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರಿಸಿದಾಗ ನಮ್ಮಲ್ಲಿ ಅಸಹಾಯಕತೆ ಉಂಟಾಗುತ್ತದೆ... ಪದೇ ಪದೇ ಅವರಿಂದ ಅವಮಾನಕ್ಕೆ ಒಳಗಾಗುವ ನಾವು ಕೀಳರಿಮೆಯಿಂದ ಬಳಲುತ್ತೇವೆ. ಇದು ವೃಥಾ ಸಲ್ಲದು.

 ಎಲ್ಲವೂ ಸರಿ ಇದ್ದಾಗ ನಮ್ಮೊಂದಿಗೆ ಎಲ್ಲರೂ ಚೆನ್ನಾಗಿಯೇ ವರ್ತಿಸುತ್ತಾರೆ... ಒಂದೊಮ್ಮೆ ನಮ್ಮ ಪರಿಸ್ಥಿತಿ ಕೆಟ್ಟಾಗಲು ಅವರು ಹಾಗೆಯೇ ವರ್ತಿಸುತ್ತಾರೆ ಮತ್ತು ಸಹಾಯಕ್ಕೆ ನಿಲ್ಲುತ್ತಾರೆ ಎಂದರೆ ಅವರೇ ನಮ್ಮ ನಿಜವಾದ ಸ್ನೇಹಿತರು ಎಂದು ಅರಿಯಬೇಕು. ಕೇವಲ ನಮ್ಮ ಸಂತೋಷದಲ್ಲಿ ಪಾಲ್ಗೊಂಡು ದುಃಖದಲ್ಲಿ ನಮಗೆ ಕೈ ಕೊಡುವ ಸ್ನೇಹ ಸಂಬಂಧಗಳಲ್ಲಿ ಯಾವುದೇ ಹುರುಳಿರುವುದಿಲ್ಲ.... ಅಂತಹ ಸಂಬಂಧಕ್ಕೆ ತಿಲಾಂಜಲಿ ನೀಡುವುದೇ ಒಳಿತು.

 ಇದನ್ನು ಕಂಡೇ ನಮ್ಮ ಹಿರಿಯರು 
 'ಬೇಕಿದ್ದರೆ ಬೆರೆತು ನಡೆ 
 ಬೇಡವಾದರೆ ಸರಿದು ನಡೆ'. ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಏನಂತೀರಾ?

 ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
Post a Comment

Post a Comment