-->
Bookmark

Naregal : ದೇಶ ಕಾ ಪ್ರಕೃತಿ ಪರೀಕ್ಷಣ ಅಭಿಯಾನ - ಆಯುರ್ವೇದದೊಂದಿಗೆ ಆರೋಗ್ಯದ ಸಂಕಲ್ಪ

Naregal : ದೇಶ ಕಾ ಪ್ರಕೃತಿ ಪರೀಕ್ಷಣ ಅಭಿಯಾನ - ಆಯುರ್ವೇದದೊಂದಿಗೆ ಆರೋಗ್ಯದ ಸಂಕಲ್ಪ

ನರೇಗಲ್ : (Dec_22_2024)

ನವೆಂಬರ್ ಡಿಸೆಂಬರ್ ನ ತಿಂಗಳು, ಅಶ್ವಿಜ- ಕಾರ್ತಿಕ ಮಾಸಗಳ ಕಾಲ, ಶರದ್ ಋತು ಮಾಗಿಯ ಹೊತ್ತು.  ಬಿಡುವಿಲ್ಲದ ಕೃಷಿ ಚಟುವಟಿಕೆಗಳೊಂದಿಗೆ ಕಾರ್ತಿಕೋತ್ಸವ ಹಾಗೂ ಲಕ್ಷದೀಪೋತ್ಸವಗಳಂತಹ ಧಾರ್ಮಿಕ ಕಾರ್ಯಗಳಲ್ಲಿ ತಾವೆಲ್ಲರೂ  ಮಗ್ನರಾಗಿರಬಹುದು. ತಮ್ಮಲ್ಲಿ ಅನೇಕರಿಗೆ ಬಾಯೊಳಗೆ ಗುಳ್ಳೆಗಳು  ( ಮುಖಪಾಕ / mouth ulcers), ಈ ಮೊದಲೇ ಆಮ್ಲಪಿತ್ತದಂತಹ (ಹುಳಿತೇಗು) ಕಾಯಿಲೆಗಳಿಂದ ಬಳಲುವವರಲ್ಲಿ ಕಾಯಿಲೆಯ ಲಕ್ಷಣಗಳಲ್ಲಿ ಉಲ್ಬಣ ಕಾಮಾಲೆಗಳಂತ ರೋಗಗಳು ಬಾಧಿಸಿರಬಹುದು. ಈ ಲಕ್ಷಣಗಳು ಈಗಲೇ ಏಕೆ ಉಲ್ಬಣಗೊಂಡವು? ಎಂಬ ಪ್ರಶ್ನೆ ತಮ್ಮ ತಲೆಯಲ್ಲಿ ಮಿಂಚಿ ಹೋಗಿರಲೂಬಹುದು. ಇದಕ್ಕೆ ಕಾರಣ ಶರತ್ ಋತುವಿನ ಪ್ರಭಾವ. ಆಯುರ್ವೇದ ಶಾಸ್ತ್ರದ ಪ್ರಕಾರ ಶರದ ಋತುವಿನಲ್ಲಿ ಪಿತ್ತ ಪ್ರಕೋಪ ವಾಗಿರುತ್ತದೆ ಕಾರಣ ಮೇಲ್ಕಾಣಿಸಿದ ಪಿತ್ತ ವಿಕಾರಗಳ ಲಕ್ಷಣಗಳಲ್ಲಿ ಉಲ್ಬಣತೆ ಕಾಣಿಸಿಕೊಂಡಿರುತ್ತದೆ. ಪಿತ್ತ ಪ್ರಕೃತಿಯ ಪುರುಷರಿಗೆ ಈ ಲಕ್ಷಣಗಳ ಬಾಧೆ ತೀವ್ರವೇ ಆಗಿರುತ್ತದೆ.ಅದೇ ರೀತಿಯಲ್ಲಿ ವಾತ ಪ್ರಕೃತಿಯವರಿಗೆ ವರ್ಷಾ ಋತುವಿನಲ್ಲಿ ಹಾಗೂ ಕಫ ಪ್ರಕೃತಿಯವರಿಗೆ ವಸಂತ ಋತುವಿನಲ್ಲೂ ಋತುಸಹಜ ವ್ಯಾಧಿಗಳ ಬಾಧೆ ತೀವ್ರವಾಗಿರುತ್ತದೆ.
ಸೂರ್ಯ ಚಂದ್ರರ ಗತಿಗಳಿಗನುಸಾರವಾಗಿ ಒಂದು ಸಂವತ್ಸರದಲ್ಲಿ ಕಾಲನ ಪರಿಣಾಮವೂ ಕೂಡ ಬದಲಾಗುವುದು. ನಿಸರ್ಗದಲ್ಲಿನ ಈ ಕಾಲದ ಬದಲಾವಣೆ ದೇಹದ ಮೂರು ನಿಯಾಮಕ ಶಕ್ತಿಗಳಾದ ವಾತ- ಪಿತ್ತ- ಕಫಗಳ( ತ್ರಿದೋಷಗಳ) ಮೇಲೆ ನಿರಂತರವಾಗಿ ಆಗುತ್ತಿರುತ್ತದೆ.  ಈ ಪರಿಣಾಮಗಳನ್ನು ಆಯುರ್ವೇದದಲ್ಲಿ ಋತು ಸಹಜ ವ್ಯಾಧಿಗಳು ಎನ್ನುತ್ತಾರೆ. ಈ ಋತು ಸಹಜವ್ಯಾಧಿಗಳಿಗೆ ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದಾದ ಜೀವನಶೈಲಿಯೇ ಅತಿ ಉತ್ತಮ ಪರಿಹಾರ.

ದೇಹ ಪ್ರಕೃತಿ ಎಂದರೇನು?
ದೇಹ ಪ್ರಕೃತಿ ಎಂದರೆ ಆಯುರ್ವೇದ ಶಾಸ್ತ್ರದ ಪ್ರಕಾರ ಶರೀರ ಸಂಬಂಧಿ ಜಾತಕ ( ಕುಂಡಲಿ )ಇದ್ದ ಹಾಗೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಮಂಡಲದಲ್ಲಿನ ಗ್ರಹಗಳ ಗತಿಗಳಿಗನುಸಾರವಾಗಿ ಅವನ ಜೀವನದಲ್ಲಿ ಸಂಭವಿಸಬಹುದಾದ ಕೆಲವು ಘಟನೆಗಳನ್ನು ಹೇಗೆ ಊಹಿಸಬಹುದೋ ಅದೇ ರೀತಿಯಲ್ಲಿ ದೇಹ ಪ್ರಕೃತಿಯ ನಿರ್ಧಾರವಾದರೆ ಸೂರ್ಯ ಚಂದ್ರರ ಗತಿಗಳಿಗನುಸಾರವಾಗಿ ಸಂಭವಿಸಬಹುದಾದ ಋತು ಸಹಜ ಬದಲಾವಣೆಗಳನ್ನು  ಗುರುತಿಸಿ ಅವರವರ ದೇಹ ಪ್ರಕೃತಿಗೆ ಅನುಸಾರವಾಗಿ ಜೀವನಶೈಲಿಯನ್ನು ನಿರ್ದೇಶಿಸಬಹುದು.
ಪ್ರಕೃತಿ ಎಂದರೆ ಮನುಷ್ಯನ ಜನ್ಮದಾರಭ್ಯ ದಿಂದ ಅವನ ಜೀವಿತ ಕಾಲದವರೆಗೆ ಇರುವ ಶಾರೀರಿಕ ಮಾನಸಿಕ ಹಾಗೂ ನಡುವಳಿಕೆಗಳಿಗೆ ಸಂಬಂಧಿಸಿದ ಸ್ವಭಾವಗಳ ಅಭಿವ್ಯಕ್ತಿ ಆಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯ ಆನುವಂಶೀಯ ಘಟಕಗಳಾದ ಬೀಜಭಾಗ (chromosome) ಬೀಜಭಾಗವಾಯವ (Genes) ಗಳ ಮುಖಾಂತರ ಅಭಿವ್ಯಕ್ತಿ ಆಗುತ್ತಿರುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಆನುವಂಶೀಯ ಘಟಕಗಳ ಅಭಿವ್ಯಕ್ತಿಯು ಗರ್ಭ ಕಾಲದಲ್ಲಿ ಮಾತಾ ಪಿತೃಗಳ ಬೀಜಗಳಲ್ಲಿ ಉಪಸ್ಥಿತವಿರುವ ದೇಹದ ಮೂರು ನಿಯಾಮಕ ಶಕ್ತಿಗಳಾದ ವಾತ-ಪಿತ್ತ-ಕಫಗಳನ್ನು ಆಧರಿಸಿ ಉಂಟಾಗುವುದು. ವಾತಪಿತ್ತ ಕಫಗಳ ಗುಣಗಳಿಗೆ ಅನುಸಾರವಾಗಿ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾದ ದೇಹ ಪ್ರಕೃತಿಯ ಲಕ್ಷಣಗಳನ್ನು ಹೊಂದಿರುತ್ತಾನೆ. ಈ ಲಕ್ಷಣಗಳು ವ್ಯಕ್ತಿಯಲ್ಲಿ ದೈಹಿಕವಾಗಿ (anatomical triats), ಕ್ರಿಯಾತ್ಮಕವಾಗಿ (physiological triats), ಮಾನಸಿಕವಾಗಿ ( psychological triats) ಹಾಗೂ ನಡುವಳಿಕೆಗಳ (behavioural triats) ಸ್ವಭಾವಗಳಾಗಿ  ಅಭಿವ್ಯಕ್ತ ಗೊಳ್ಳುತ್ತಿರುತ್ತವೆ. ಈ ರೀತಿ ಅಭಿವ್ಯಕ್ತಗೊಳ್ಳುವ ಲಕ್ಷಣಗಳ ಮೂಲಕ ವ್ಯಕ್ತಿಯ ದೇಹ ಪ್ರಕೃತಿಯನ್ನು ನಿರ್ಧರಿಸಬಹುದಾಗಿದೆ ಹಾಗೂ ಅದು ಆ ವ್ಯಕ್ತಿಯ ಆರೋಗ್ಯವಾಗಿರುತ್ತದೆ.  ವೈದ್ಯನಾದವನು ದೇಹ ಪ್ರಕೃತಿಯನ್ನು ನಿರ್ಧರಿಸಿ ನಂತರ ಅವನ ವಿಕೃತಿಯನ್ನು ನಿರ್ಣಯಿಸಬೇಕಾಗುತ್ತದೆ. ಯಾವ ವ್ಯಕ್ತಿಯು ಋತುಮಾನಗಳಿಗ ನುಸಾರವಾಗಿ ತನ್ನ ದೇಹ ಪ್ರಕೃತಿಗೆ ವಿರುದ್ಧ ಗುಣಗಳಿರುವ ಆಹಾರವನ್ನು ಸೇವಿಸುತ್ತಾನೋ ಅವನು ಆರೋಗ್ಯಪೂರ್ಣ ಜೀವನವನ್ನು ನಡೆಸಬಲ್ಲ ಎಂದು ಆಚಾರ್ಯ ಚರಕರು ನಿರ್ದೇಶಿಸಿರುತ್ತಾರೆ.

 ವಿಪರೀತ ಗುಣಸ್ತೇ ಶಾಮ್ ಸ್ವಸ್ಥವೃತ್ತರ್ವಿಧೀರಹಿತಹ |
 ಸಮ ಸರ್ವರಸಮ್ ಸಾತ್ಮ್ಯಂ ಸಮಾಧಾತೋ ಪ್ರಶಸ್ಯತೆ || (ಚ.ಸು.7/41) 

ದೇಶ ಕಾ ಪ್ರಕೃತಿ ಪರೀಕ್ಷಣಾ ಅಭಿಯಾನ್ 

ದೇಶ ಕಾ ಪ್ರಕೃತಿ ಪರೀಕ್ಷಾ  ಅಭಿಯಾನ್ " ಆಯುಷ್ ಸಚಿವಾಲಯ"ದಿಂದ ಆಯೋಜಿಸಲ್ಪಟ್ಟಿರುವಂತಹ ಬೃಹತ್ ಅಭಿಯಾನವಾಗಿರುತ್ತದೆ. ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂದು ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿರುತ್ತಾರೆ. ದೇಶ ಕಾ ಪ್ರಕೃತಿ ಪರೀಕ್ಷಾ ಅಭಿಯಾನವು " ಪ್ರಕೃತಿ ಪರೀಕ್ಷಾ " ಎಂಬ ಒಂದು ಆಪ್ ನ ಮೂಲಕ ನಡೆಸಬಹುದಾದಂತಹ ಒಂದು ಅತ್ಯಂತ ಸರಳವಾದ ಸರ್ವೆಯಾಗಿದೆ. ಪ್ರಕೃತಿ ಪರೀಕ್ಷಾ ಅಭಿಯಾನದ ಸ್ವಯಂಸೇವಕರು (ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ನೋಂದಾಯಿತ ಆಯುರ್ವೇದ ವೈದ್ಯರುಗಳು ) ತಮ್ಮ ಮನೆ ವ ಕಚೇರಿಗಳಿಗೆ ಬಂದು ಈ ಡಿಜಿಟಲ್ ಆಪ್ ಮುಖಾಂತರ ಓಟಿಪಿಯ ಸಹಾಯದೊಂದಿಗೆ ತಮ್ಮ ದೇಹ ಪ್ರಕೃತಿಯನ್ನು ಪರೀಕ್ಷಿಸುತ್ತಾರೆ. ಪರೀಕ್ಷೆ ಪೂರ್ಣಗೊಂಡ ಕೂಡಲೇ ತಮಗೆಲ್ಲ ಡಿಜಿಟಲ್ ಪ್ರಕೃತಿ ಸರ್ಟಿಫಿಕೇಟ ತಮ್ಮ ಆಪ್ ಮೂಲಕ ತಮ್ಮ ಮೊಬೈಲ್ ಫೋನಿಗೆ  ರವಾನೆ ಯಾಗುತ್ತದೆ. ಅಲ್ಲದೆ  ಕಾಲಕಾಲಕ್ಕೆ ಋತುಗಳಿಗೆ  ಅನುಸಾರವಾಗಿ ತಮ್ಮ ಜೀವನ ಶೈಲಿಯ ಕುರಿತು ಅಮೂಲ್ಯವಾದ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಕಾರಣ ತಾವೆಲ್ಲರೂ ಈ ಪ್ರಕೃತಿ ಪರೀಕ್ಷಾ ಅಭಿಯಾನದ ಸ್ವಯಂ ಸೇವಕರಿಗೆ ಸಂಪೂರ್ಣ ಸಹಕಾರವನ್ನು ತೋರಿ  ತಮ್ಮ ದೇಹ ಪ್ರಕೃತಿಯನ್ನು ಪರೀಕ್ಷಿಸಿಕೊಂಡು  ಅವರ ಸಲಹೆಗಳಂತೆ ಜೀವನ ಶೈಲಿಯನ್ನು  ಅಳವಡಿಸಿಕೊಂಡು ರೋಗರಹಿತವಾದ ಆರೋಗ್ಯಪೂರ್ಣ ಜೀವನವನ್ನು ನಡೆಸಬೇಕೆಂದು ಈ ಮೂಲಕ ತಮ್ಮಲ್ಲಿ  ವಿನಂತಿಸಿಕೊಳ್ಳುತ್ತೇವೆ. 

 ಪ್ರಕೃತಿ ಪರೀಕ್ಷೆಯಿಂದ ಆಗುವ ಉಪಯೋಗಗಳು 
ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು. 
ನಿಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ ಮತ್ತು ಋತುಗಳಿಗನುಸಾರವಾಗಿ ದೈನಂದಿನ ಆಹಾರ ವಿಹಾರಗಳ ಮಾಹಿತಿ ನಿಮ್ಮ ಮೊಬೈಲ್ಗಳಿಗೆ ಸಂದೇಶಗಳ ಮುಖಾಂತರ ರವಾನೆಯಾಗುವುದು 
ಸೂಕ್ತವಾದ ಮಾಹಿತಿಯಿಂದ ರೋಗರಹಿತವಾದ ಸುಧೀರ್ಘ ಸುಖ ಜೀವನ ನಡೆಸಬಹುದು, ಕಾರಣ ತಾವೆಲ್ಲರೂ ಈ ಪ್ರಕೃತಿ ಪರೀಕ್ಷಣ ಅಭಯಾನದಲ್ಲಿ ಪಾಲ್ಗೊಂಡು ತಮ್ಮ ಪ್ರಕೃತಿಯನ್ನು ಪರೀಕ್ಷಿಸಿಕೊಂಡು  ಈ ಅಭಿಯಾನವನ್ನು ಯಶಸ್ವಿಗೊಳಿಸಿ ಉಚಿತ ಪಥ್ಯಾ ಪಥ್ಯಗಳೊಂದಿಗೆ  ಸುಖಮಯವಾದ ಆರೋಗ್ಯ ಪೂರ್ಣ ಜೀವನ ನಡೆಸಬೇಕಾಗಿ ವಿನಂತಿ. ಪ್ರಕೃತಿಗನುಸಾರವಾಗಿ ಸಂಕ್ಷಿಪ್ತವಾದ ಆಹಾರ ಶೈಲಿ ವಾತ ಪ್ರಕೃತಿ ಪುರುಷರಿಗೆ ಸಿಹಿ, ಹುಳಿ ಹಾಗೂ ಉಚಿತ ಪ್ರಮಾಣದಲ್ಲಿ ಉಪ್ಪುನಿಂದ ತಯಾಸಿದ ಖಾದ್ಯಗಳು ಉಪಯುಕ್ತ. ಮಾವಿನ ಹಣ್ಣು, ಕರಬೂಜ, ಕಿತ್ತಳೆ, ಸೌತೆ ಹಣ್ಣು, ಬಾರೆ ಹಣ್ಣು, ಕವಳೆ ಹಣ್ಣು, ಸೇಬು, ಪೇರಲ ಹಣ್ಣು, ಬಾದಾಮ ಇತ್ಯಾದಿಗಳು 

ಅದೇ ರೀತಿಯಲ್ಲಿ ನಿಂಬು, ಬೀನ್ಸ್, ಕ್ಯಾಬೀಜ, ಗಜ್ಜರಿ, ನುಗ್ಗೆ, ಈರುಳ್ಳಿ, ಕುಂಬಳಕಾಯಿ, ಗೆಣಸು, ಪಾಲಕ, ಅಕ್ಕಿ, ಗೋಧಿ, ಹೆಸರು ಕಾಳು, ಉದ್ದು, ತೊಗರಿ ಬೇಳೆ, ಬೆಣ್ಣೆ, ತುಪ್ಪ, ಮಾಂಸಾಹಾರ ಇತ್ಯಾದಿ 
ಪಿತ್ತ ಪ್ರಕೃತಿ ಪುರುಷರಿಗೆ ಬಾಳೆ ಹಣ್ಣು, ಎಳೆ ಕೊಬ್ಬರಿ, ಕರಾಬೂಜ, ತಾಳೆ ಹಣ್ಣು, ನೇರಳೆ ಹಣ್ಣು, ದ್ರಾಕ್ಷಿ, ಸಣ್ಣ ನೆಲ್ಲಿ, ದಾಳಿಂಬೆ, ಪೈನಾಪಲ್ ಇತ್ಯಾದಿ. ಬೀಟರೂಟ್, ಈರುಳ್ಳಿ, ಬೆಂಡಿಕಾಯಿ, ಗೆಣಸು, ಆಲೂಗಡ್ಡೆ, ಹಾಗಲಕಾಯಿ, ಫ್ಲವರ್, ಸವತೇಕಾಯಿ, ಓಟ್ಸ್, ಗೋಧಿ, ಅಲಸಂದಿ, ಹೆಸರು, ಸೋಯಾ, ಬೆಣ್ಣೆ, ತುಪ್ಪ, ಹಾಲು, ಕಲ್ಲುಸಕ್ಕರೆ, ಮಾಂಸಾಹಾರ ( ಕಡಿಮೆ ಮಸಾಲೆಯೊಂದಿಗೆ ).
ಕಫ ಪ್ರಕೃತಿಯವರಿಗೆ ಸೌತೆಹಣ್ಣು, ನೇರಳೆಹಣ್ಣು, ಸಣ್ಣನೆಲ್ಲಿ, ದಾಳಿಂಬೆ, ಸೇಬು, ಪೇರಳೆ ಹಣ್ಣು, ಬೂದುಗುಂಬಳ, ಬದನೆಕಾಯಿ, ಬೀಟ್ರೂಟ್, ಸೌತೆ, ತುಪ್ಪರಿಕಾಯಿ, ಹಾಗಲಕಾಯಿ, ಕರಿಬೇವು, ಬಟಾಣಿ, ಬೆಂಡಿಕಾಯಿ, ಮೆಣಸು, ಮೂಲಂಗಿ, ಬಳ್ಳೊಳ್ಳಿ, ಬೀನ್ಸ್, ಬಾಸುಮತಿ ಅಕ್ಕಿ, ಹೆಸರು, ಅಲಸಂದಿ, ತೊಗರೆಬೇಳೆ, ಸೋಯಾ ಇತ್ಯಾದಿಗಳು.

ವಿಶೇಷ ಸೂಚನೆ :
ಈ ಆಹಾರ ಪದ್ಧತಿಗಳನ್ನು ಋತುಮಾನಗಳಿಗೆ ಅನುಸಾರವಾಗಿ ಅಳವಡಿಸಿಕೊಳ್ಳಬೇಕು. ಅದಕ್ಕೆ ವೈದ್ಯರ ಸಲಹೆ ಅಗತ್ಯ.

ಪ್ರಕೃತಿ ಪರೀಕ್ಷಾ ಅಭಿಯಾನಕ್ಕೆ 18 ವರ್ಷ ಮೇಲ್ಪಟ್ಟ ಹಾಗೂ 70 ವರ್ಷದ ಒಳಗಿನ ನಾಗರಿಕರು ಮಾತ್ರ ಅರ್ಹರು ಇರುತ್ತಾರೆ.
 ---
ಡಾ. ಶಿವಯ್ಯ ಅಂದಾನಯ್ಯ ರೋಣದ
ಸಂಜೀವಿನಿ ಕ್ಲಿನಿಕ್, ನರೇಗಲ್
ಮೊಬೈಲ್: 9986512721
Post a Comment

Post a Comment