ಹುಬ್ಬಳ್ಳಿ: (Dec_12_2024)
ನಾಡಿನ ಹಿರಿಯ ಸಾಹಿತಿ ,ಕನ್ನಡ ಸಾಹಿತ್ಯ ಲೋಕಕ್ಕೆ 50ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಡಾ. ಸಂಗಮೇಶ ಹಂಡಿಗಿ ಅವರ ನೆನಪಿನಲ್ಲಿ ಆರಂಭಗೊಂಡ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ "ಸಂಗಮ ಸಿರಿ" ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಗೋಕುಲ್ ರಸ್ತೆಯ ಬ್ರೈಟ್ ಬ್ಯುಸಿನೆಸ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು .ಮೂರನೆ "ಸಂಗಮ ಸಿರಿ"ಪ್ರಶಸ್ತಿಯು ಕಾವ್ಯ ವಿಭಾಗದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿವರ ಗ್ರಾಮದ ಡಾ. ಎಸ್ .ಕೆ. ಮಂಜುನಾಥ್ ಅವರ "ಗಾಳಿಯ ಎದೆ ಸೀಳಿ ಹೊರಟ ಹಕ್ಕಿ, "ಕೃತಿ’’ ಗೆ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು. ಸಾನಿಧ್ಯ ವಹಿಸಿದ ಭೈರನಟ್ಟಿ ದೊರೆಸ್ವಾಮಿ ಮಠ,ಶಿರೋಳ ತೋಂಟ ದಾರ್ಯ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ,ಸಾಹಿತಿಗಳು ಅಕ್ಷರ ಕಟ್ಟಬಾರದು, ಸಮಾಜದಲ್ಲಿನ ಮೌಲ್ಯಗಳನ್ನು ಬಿತ್ತುವ ಸಾಹಿತ್ಯ ಇಂದಿನ ತುರ್ತು ಅಗತ್ಯ. ಸಾಹಿತ್ಯ ನಮ್ಮ ಮನಸ್ಸನ್ನು ಅರಳಿಸುವಂತಿರಬೇಕು. ಕವಿ ತನ್ನ ಕಷ್ಟವೇ ಇರಲಿ ಸುಖವೇ ಇರಲಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ .ಮನುಷ್ಯನ ಮನಸ್ಸು ಅನಂತ ಭಾವಗಳ ಅಕ್ಷಯ ಪಾತ್ರೆ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತ ಡಾ.ಎಸ್. ಕೆ. ಮಂಜುನಾಥ್ ಮಾತನಾಡಿ, ನಾನು ಕವಿಯಾಗಬೇಕೆಂದು ಕವಿತೆ ಬರೆಯಲಿಲ್ಲ. ಒಂದು ಸಂಕಲನ ಬಂದ ನಂತರ ಹಲವು ವರ್ಷಗಳ ಕಾಲ ತಡೆದು ಈ ಕೃತಿಯನ್ನು ಹೊರಗೆ ತಂದೆ. ಇದಕ್ಕೆ ಪ್ರಶಸ್ತಿ ಸಿಕ್ಕಿದ್ದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೋಳ ಮಾತನಾಡಿ, ಗುರುವಿನ ಮಾತು ಯುವಕರಿಗೆ ಚಿಂತನೆ ಹಚ್ಚುವ ವಿಚಾರಗಳು ಇರಬೇಕು. ಹೀಗಿದ್ದಾಗ ಮಾತ್ರ ಉತ್ತಮ ಶಿಷ್ಯಬಳಗ ಬೆಳೆಯಲು ಸಾಧ್ಯ. ನಮಗೆಲ್ಲ ಉತ್ತಮ ಶಿಕ್ಷಕ ಬಳಗ ಸಿಕ್ಕಿದ್ದರಿಂದ ಇಂದು ನಾವು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿ ತಮ್ಮ ಹಾಗೂ ಡಾ.ಸಂಗಮೇಶ ಹಂಡಿಗಿ ಅವರ ಒಡನಾಟವನ್ನು ನೆನಪಿಸಿಕೊಂಡರು. ಕೃತಿ ಕುರಿತು ಹಿರಿಯ ಸಾಹಿತಿ ಮಹಾಂತಪ್ಪ ನಂದೂರು ಮಾತನಾಡಿ, ರಾಜ್ಯಾದ್ಯಂತ ಹಿರಿ ಕಿರಿಯ ಕವಿಗಳನ್ನು ಒಳಗೊಂಡ 86 ಕೃತಿಗಳು ಬಂದಿದ್ದವು. ಇಂದು ಬರೆದಿದ್ದಲ್ಲ ಕವಿತೆ ಎಂಬ ಭಾವನೆಯಲ್ಲಿ ಬರಹಗಾರ ಇರಬಾರದು. ನಮ್ಮ ಬರಹ ಎಷ್ಟರಮಟ್ಟಿಗೆ ಯೋಗ್ಯತೆ ಇದೆ ಎಂಬ ಅರಿವು ಇಟ್ಟುಕೊಂಡು ಬರೆದರೆ ಉತ್ತಮ ಕಾವ್ಯ ಹೊರಬರಲು ಸಾಧ್ಯವಾಗುತ್ತದೆ. ಈ ಪ್ರಶಸ್ತಿ ಆಯ್ಕೆಗೆ ಮೂರು ಹಂತಗಳನ್ನು ಮಾಡಿ ಸೋಸಿ ಅಂತಿಮವಾಗಿ ಮೂರು ಕೃತಿಗಳನ್ನು ಆಯ್ಕೆ ಮಾಡಿಕೊಡಲಾಯಿತು. ಅದರಲ್ಲಿ ಮಂಜುನಾಥವರು ಕೃತಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಹೇಳಿದರು . ಅತಿಥಿಯಾಗಿ ಬ್ರೈಟ್ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಲ್. ಲಿಂಗಶೆಟ್ಟರ್ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐ .ಎಂ. ವಲ್ಲೇಪ್ಪನವರು, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಮಮೂಲಗಿ ಜಾನಪದ ಹಾಡುಗಳ ಮೂಲಕ ಮನರಂಜಿಸಿದರು. ಇದೇ ಸಂದರ್ಭದಲ್ಲಿ ನಟ ಹಾಗೂ ಚಿತ್ರ ನಿರ್ಮಾಪಕ ಜೆ.ಜಿ. ಸಂಸ್ಥಾನ ಮಠ ,ಬೆಂಗಳೂರಿನ ವಾಣಿಜ್ಯ ಕಲಾವಿದ ಗೋಪಾಲ್ ಮನುವಾಚಾರ್ಯ ಹಾಗೂ ಗಿನ್ನಿಸ ದಾಖಲೆ ಮಾಡಿದ ಸ್ತುತಿ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ವೀರೇಶ್ ಹಂಡಿಗಿ ಸ್ವಾಗತಿಸಿದರೆ, ಕಾರ್ಯದರ್ಶಿ ಡಾ .ಬಿ. ಎಸ್. ಮಾಳವಾಡ ಪರಿಚಯಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿನ ಉಪಾಧ್ಯಕ್ಷರಾದ ಲಿಂಗರಾಜ್ ಅಂಗಡಿ, ಸಂತೋಷ ಶೆಟ್ಟಿ ಹಾಗೂ ನಿರ್ದೇಶಕರಾದ ಬಸವರಾಜ ಕರ್ಕಿ ಸಂಭಾಜಿ ಕಲಾಲ್ ,ಆರ್. ಎಂ. ಗೋಗೇರಿ, ಪ್ರೊ .ಎಸ್.ವಿ. ಪಟ್ಟಣಶೆಟ್ಟಿ ಇತರರು ಇದ್ದರು. ಕವಿ ಸೋಮು ರೆಡ್ಡಿ ನಿರೂಪಿಸಿದರು. ಸಹ ಕಾರ್ಯದರ್ಶಿ ರವೀಂದ್ರ ರಾಮದುರ್ಗ ಕರ್ ವಂದಿಸಿದರು.
**
-ಡಾ.ಪ್ರಭು ಗಂಜಿಹಾಳ
ಮೊ:9448775346
Post a Comment