ನರೇಗಲ್ : (Nov_07_2024)
ನಮ್ಮ ಜಿಲ್ಲೆಯಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ವಿದ್ಯಾವಂತ ಜನರು ಸೈಬರ್ ಅಪರಾಧ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗುತ್ತಿದ್ದಾರೆ. 80 ಲಕ್ಷ, ಕೋಟಿ ವರೆಗೂ ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಆದ್ದರಿಂದ ನಿಯಂತ್ರಣ ಮಾಡಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂಗಳ ಜಾಗೃತಿ ಅಗತ್ಯವಾಗಿದೆ ಎಂದು ಗದಗ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ (ಸಿಇಎನ್) ಗದಗ ಇವರ ವತಿಯಿಂದ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ಗುರುವಾರ ನಡೆದ “ಸೈಬರ್ ಕ್ರೈಂ ಮತ್ತು ಮಾದಕ ವಸ್ತುಗಳ ಅಪರಾಧಗಳ” ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ದುಡಿಯದೇ ಅತೆಚ್ಚು ಹಣ ಗಳಿಸುವ, ಆಫರ್‌ನಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ, ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವ ದುರಾಸೆಗೆ ಸಿಲುಕಿರುವ ಜನರೇ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆ ಜಾಲದಲ್ಲಿ ಸಿಲುಕುತ್ತಿದ್ದಾರೆ. ಪದವಿ ಹಂತದ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಗೆಳೆತನ ಮಾಡಿ ವೈಯಕ್ತಿಕ ಹಾಗೂ ಫಿನಾನ್ಸಿಯಲ್ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ತೊಂದರೆಗೆ ಸಿಲುಕಿ ಬಕ್ರಾ ಆಗುತ್ತಿದ್ದಾರೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪರಿಚಿತರ ಗೆಳೆತನ ಮಾಡಬೇಕು ಹಾಗೂ ಟು ಫೇಸ್ ಪ್ರೈವೈಸಿ ನಿಯಂತ್ರಣ ಮಾಡಿಕೊಳ್ಳಬೇಕು. ಮಾಹಿತಿ ಸಂಗ್ರಹಣೆ, ವಿಚಾರ ವಿನಿಮಯಕ್ಕಾಗಿ ಮಾತ್ರ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು. ಅದರಲ್ಲಿ ಅನಗತ್ಯ ಮಾಹಿತಿ ಎಪಿಕೆಗಳನ್ನು ಹಾಕಬಾರದು ಹಾಗೂ ಡೌನ್‌ಲೋಡ್ ಮಾಡಬಾರದು. ಇತ್ತೀನ ದಿನಗಳಲ್ಲಿ ನೌಕರಿ ಆಸೆಗೆ, ನೋಟ್ಸ್ ಆಸೆಗೆ ವಿದ್ಯಾರ್ಥಿಗಳು ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ ಆದ್ದರಿಂದ ಜಾಗರೂತಕೆಯಿಂದ ಇರಬೇಕು ಎಂದರು.
ಶಾಪಿಂಗ್ ಮಾಲ್ ಹಾಗೂ ಎಲ್ಲೆಂದರಲ್ಲಿ, ಅಪರಿಚತರಿಗೆ ಫೋನ್ ನಂಬರ್, ಇಮೇಲ್ ಐಡಿ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್, ಇಂಟರ್‌ನೆಟ್ ಬ್ಯಾಂಕಿಂಗ್ ಪಾಸವರ್ಡ್‌ಗಳ ಬಗ್ಗೆ ಮಾಹಿತಿ ನೀಡಬಾರದು ಎಂದರು. ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಫೋನ್ ಮಾಡುವ ವ್ಯಕ್ತಿಗಳ ಜೊತೆಗೆ ಯಾವತ್ತೂ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಸ್. ಎಲ್. ಗುಳೆದಗುಡ್ಡ, ದಿನದಿಂದ ದಿನಕ್ಕೆ ಸೈಬರ್ ಅಪರಾಧ ಜಾಲ ವಿಸ್ತಾರವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಜಾಗೃತರಾಗಬೇಕು. ವಂಚನೆಗೆ ಒಳಗಾಗುವವರು ಇರುವವರೆಗೂ ಮೋಸ ಮಾಡುವವರೂ ಇರುತ್ತಾರೆ. ಈ ನಿಟ್ಟಿನಲ್ಲಿ ಇಲಾಖೆ ಕಾಲೇಜಿಗೆ ಬಂದು ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಈ ವೇಳೆ ಸಿಇಎನ್ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಕಲಿ ಫೆಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಹಣ ಕೇಳುತ್ತಿರುವ, ಐಪಿಎಸ್ ಅಧಿಕಾರಿಗಳ ಫೋಟೋ ಹೆಸರಿನಲ್ಲಿ ಕಾಲ್ ಮಾಡುತ್ತಿರುವ ಕುರಿತು ವಿದ್ಯಾರ್ಥಿನಿಯರು ಮಾಹಿತಿ ನೀಡಿದರು ಹಾಗೂ ಮೊಬೈಲ್ ನಲ್ಲಿ ತೋರಿಸಿದರು. ಆಗ ಬ್ಲಾಕ್ ಮಾಡುವ ವಿಧಾನವನ್ನು ಸಿಇಎನ್ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಸಿಇಎನ್ ವಿಭಾಗದ ಶಿವಕುಮಾರ ಹರ್ಲಾಪುರ, ಕಿರಣ, ಹಿರಿಯ ಪ್ರಾಧ್ಯಾಪಕ ಎಸ್. ಎಸ್.ಸೂಡಿ, ಜ್ಯೋತಿ ಬೋಳಣ್ಣವರ, ನಸರೀನ್‌ಬಾನು ಜಮಾದರ, ಅಂಜನಮೂರ್ತಿ, ಅನಿಲಕುಮಾರ, ಸುನಂದಾ ಮುಂಜಿ, ವಿ. ಸಿ. ಇಲ್ಲೂರ, ಜಯಶ್ರೀ ಮುತಗಾರ, ನಾಗರಾಜ ಹೊನ್ನೂರ, ಬಸವರಾಜ ಕಂಬಳಿ, ಚಂದ್ರು ಸಂಶಿ, ಬಸವರಾಜ ಪಲ್ಲೇದ, ವಿ. ಕೆ. ಸಂಗನಾಳ, ಬಸವರಾಜ ಮಡಿವಾಳರ, ಕಿರಣ ರಂಜಣಗಿ, ಎಂ. ಎಫ್. ತಹಶೀಲ್ದಾರ, ಶಂಕರ ನರಗುಂದ, ಶಶಿಕಲಾ ಕಿನ್ನಾಳ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಸಿದ್ದು ನವಲಗುಂದ ಇದ್ದರು.
Post a Comment