ಬಾಗಲಕೋಟೆ : (Nov_22_2024)
ಜಿಲ್ಲೆಯ ಇಳಕಲ್‌ನ ಹೇರ್ ಡ್ರೈಯರ್ ಸ್ಫೋಟ ಪ್ರಕರಣದ ಪಾರ್ಸಲ್ ಮೂಲ ಕೆದಕಲು ಮುಂದಾದ ಪೊಲೀಸರಿಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಗಾಗಿ ರೂಪಿಸಿದ್ದ ಸಂಚು ಎಂಬುದು ಬಯಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ, 'ಕೊಲೆಗೆ ಯತ್ನಿಸಿದ ಸಿದ್ದಪ್ಪ ಶೀಲವಂತ ಎಂಬುವವರನ್ನು ಪೊಲೀಸರು ಬಂಧಿಸಿದ್ದೇವೆ' ಎಂದರು.
'ಹೇರ್ ಡ್ರೈಯರ್ ಸ್ಪೋಟಗೊಂಡು ಗಾಯಗೊಂಡಿರುವ ಬಸವರಾಜೇಶ್ವರಿ ಯರನಾಳ, ಕೊಲೆಗೆ ಸಂಚು ರೂಪಿಸಿದ್ದ ಸಿದ್ದಪ್ಪ ಶೀಲವಂತ ಕುಷ್ಟಗಿ ತಾಲ್ಲೂಕಿನ ಪುರತಗೇರಿಯವರು. ಅವರಿಬ್ಬರಿಗೆ ಮದುವೆಗೆ ಮೊದಲೇ ಪರಿಚಯವಿತ್ತು. ಅವರ ಪತಿ ನಿಧನದ ನಂತರ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಇಳಕಲ್‌ನಲ್ಲಿದ್ದ ಅವರ ಮನೆಗೆ ಹೋಗುತ್ತಿದ್ದನ್ನು, ತಮ್ಮಿಬ್ಬರ ನಡುವೆ ಸಂಬಂಧವಿತ್ತು ಎಂಬುದನ್ನು ಸಿದ್ದಪ್ಪ ಒಪ್ಪಿಕೊಂಡಿದ್ದಾನೆ' ಎಂದು ತಿಳಿಸಿದರು.
'ಬಸವರಾಜೇಶ್ವರಿ, ಶಶಿಕಲಾ ಇಬ್ಬರ ಪತಿ ಸೇನೆಯಲ್ಲಿದ್ದರು. ಇಬ್ಬರ ಪತಿಯೂ ಮೃತರಾಗಿದ್ದಾರೆ. ಸೈನಿಕ ಕಲ್ಯಾಣ ಮಂಡಳಿಗೆ ಹೋದಾಗ ಇಬ್ಬರಿಗೆ ಪರಿಚಯವಾಗಿ, ಸ್ನೇಹಿತೆಯರಾಗಿದ್ದರು. ಸಿದ್ದಪ್ಪ ಅವರನ್ನು ಅಲ್ಲಿಯೇ ಬಸವರಾಜೇಶ್ವರಿ, ಶಶಿಕಲಾಗೆ ಪರಿಚಯಿಸಿದ್ದರು' ಎಂದರು.
“ಸಿದ್ದಪ್ಪನೊಂದಿಗೆ ಸಂಬಂಧ ಒಳ್ಳೆಯದಲ್ಲ. ಅದನ್ನು ಬಿಟ್ಟು ಬಿಡುವಂತೆ ಶಶಿಕಲಾ, ಬಸವರಾಜೇಶ್ವರಿಗೆ ಸಲಹೆ ನೀಡಿದ್ದರು. ಅದರಂತೆ ಸಿದಪ್ಪ ಅವರನ್ನು ದೂರ ಇಡಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದು ಶಶಿಕಲಾ ಅವರನ್ನು ಕೊಲೆ ಮಾಡಲು ಸಿದ್ದಪ್ಪ ಸಂಚು ರೂಪಿಸಿದ್ದ' ಎಂದು ವಿವರಿಸಿದರು.
'ದಾಲ್ವಿನ್ ಗ್ರಾನೈಟ್ಸ್ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದ ಸಿದ್ದಪ್ಪ, ಅಲ್ಲಿ ಕಲ್ಲು ಸ್ಫೋಟಿಸಲು ಇಟ್ಟಿದ್ದ ಡಿಟೊನೇಟರ್ ತಂದಿದ್ದ. ಅದನ್ನು ಹೇರ್ ಡ್ರೈಯರ್‌ಗೆ ಜೋಡಿಸಿ, ಅದನ್ನು ಬಾಗಲಕೋಟೆಯ ಡಿಟಿಡಿಸಿ ಕೋರಿಯರ್‌ನಿಂದ ಶಶಿಕಲಾಗೆ ಕಳುಹಿಸಿದ್ದರು. ಊರಿನಲ್ಲಿಲ್ಲದ್ದರಿಂದ ಬಸವರಾಜೇಶ್ವರಿಗೆ ತರಲು ಶಶಿಕಲಾ ತಿಳಿಸಿದ್ದಳು' ಎಂದರು.
'ಕೊರಿಯರ್ ತಂದಿದ್ದ ಬಸವರಾಜೇಶ್ವರಿ ಮನೆಯಲ್ಲಿರಿಸಿದ್ದರು. ಶಾಲೆಯಿಂದ ಮಕ್ಕಳು, ಕೊರಿಯರ್ ಓಪನ್ ಮಾಡಿ ಏನು ಬಂದಿದೆ ನೋಡುವಂತೆ ಕೇಳಿದಾಗ ಅದನ್ನು ಓಪನ್ ಮಾಡಲಾಗಿತ್ತು. ಹೇರ್ ಡ್ರಯರ್ ಇದ್ದದ್ದರಿಂದ ಆನ್ ಮಾಡಲು ಪ್ಲಗ್ ಹಾಕಿ, ಸ್ವಿಚ್ ಆನ್ ಮಾಡುತ್ತಿದ್ದಂತೆಯೇ ಸ್ಪೋಟಗೊಂಡು ಎರಡೂ ಕೈ ಬೆರಳುಗಳು ಛಿದ್ರಗೊಂಡಿವೆ' ಎಂದು ತಿಳಿಸಿದರು.
Post a Comment