-->
Bookmark

Gadag : (Oct_17_2024)ಒಂದೇ ಗೋದಾಮಿನಲ್ಲಿ ಪಡಿತರ ಅಕ್ಕಿ, ರಸಗೊಬ್ಬರ, ಕ್ರಿಮಿನಾಶಕ, ಸಿಮೆಂಟ್ ದಾಸ್ತಾನು: ಆತಂಕದಲ್ಲಿ ಗ್ರಾಮಸ್ಥರು

Gadag : 
ಗದಗ : (Oct_17_2024)
ಒಂದೇ ಗೋದಾಮಿನಲ್ಲಿ ಪಡಿತರ ಅಕ್ಕಿ, ರಸಗೊಬ್ಬರ, ಕ್ರಿಮಿನಾಶಕ, ಸಿಮೆಂಟ್ ದಾಸ್ತಾನು: ಆತಂಕದಲ್ಲಿ ಗ್ರಾಮಸ್ಥರು
ಬಡವರಿಗೆ ಉತ್ತಮ ಗುಣ ಮಟ್ಟದ ಆಹಾರ ಕೊಡುವ ಉದ್ದೇಶದಿಂದ ಸರಕಾರ ಪಡಿತರ ಕಾರ್ಡ್ ವ್ಯವಸ್ಥೆ ಮಾಡಿ, ನ್ಯಾಯ ಬೆಲೆ ಅಂಗಡಿ ಮೂಲಕ ಬಡವರಿಗೆ ಕೊಡಲಾಗುತ್ತದೆ. ಆದರೆ ಇಲ್ಲೊಂದು ನ್ಯಾಯಬೆಲೆಯ ಅಂಗಡಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ ಗೊಬ್ಬರ, ಕ್ರಿಮಿನಾಶಕದಂತಹ ಎಣ್ಣೆ ಔಷಧಿ, ರಸಗೊಬ್ಬರ, ಶೇಖರಣೆ ಮಾಡಿ, ಜನರಿಗೆ ರೇಷನ್ ಹಂಚುತ್ತಾರೆ. ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ.

ಇದು ಬೆಳಕಿಗೆ ಬಂದಿರುವುದು ಗದಗ ಜಿಲ್ಲೆಯ ರೋಣ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ. ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರದಿಂದ ಬರುವಂತಹ ರೇಷನ್ ಸಾಮಗ್ರಿಗಳನ್ನು ಮಾತ್ರ ಇಟ್ಟುಕೊಂಡು ಜನರಿಗೆ ವಿತರಣೆ ಮಾಡಬೇಕು. ಆದರೆ, ಈ ನ್ಯಾಯಬೆಲೆ ಅಂಗಡಿಯ ವ್ಯವಸ್ಥಾಪಕ ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳು, ಸಿಮೆಂಟ್, ರೇಷನ್ ಜೊತೆಗೆ ಇಟ್ಟು ಎಲ್ಲವನ್ನೂ ಹಂಚುತ್ತಿದ್ದಾನೆ. ಇದರಿಂದ ಕಲಬೆರಕೆಯಾದರೆ ಜನರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ.

ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರಿ ರಜೆ ಹೊರತು ಪಡಿಸಿ, ತಿಂಗಳು ಪೂರ್ತಿ ರೇಷನ್ ವಿತರಣೆ ಮಾಡಬೇಕು. ಆದರೆ ಇಲ್ಲಿ ಕೇವಲ ಮೂರು ದಿನ ವಿತರಣೆ ಮಾಡಿ ಬಂದು ಮಾಡುತ್ತಾರೆ. ಜನರು ಕೇಳಲು ಹೋದರೆ, ರೇಷನ್ ಖಾಲಿ ಆಗಿದೆ, ಮುಂದಿನ ತಿಂಗಳು ಬರಬೇಕು ಎಂದು ದರ್ಪದಿಂದ ವರ್ತಿಸುತ್ತಾನೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದು, ನ್ಯಾಯಬೆಲೆ ಅಂಗಡಿ ಬೋರ್ಡ್ ಕೂಡ ಸರಿಯಾಗಿ ಕಾಣದಂತೆ ಇಡಲಾಗಿದೆ. ರಾಸಾಯನಿಕ ಗೊಬ್ಬರಗಳೇನಾದರೂ ಯಾವುದಾದರೂ ಪಡಿತರ ಸಾಮಗ್ರಿಯಲ್ಲಿ ಮಿಶ್ರಣವಾಗಿ ಅನಾಹುತವಾದಲ್ಲಿ ಯಾರು ಹೊಣೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಒಂದೇ ಕಟ್ಟಡದಲ್ಲಿ ಎರಡು ಬೋರ್ಡ್ : 

ಹಾಳಕೇರಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರಿ ಪತ್ತಿನ ಸೊಸೈಟಿ ಎರಡು ಒಂದೇ ಕಟ್ಟಡದಲ್ಲಿ ಇವೆ. ಸರಕಾರದ ನಿಯಮಗಳನ್ನು ಇವರು ಲೆಕ್ಕಕ್ಕೆ ಇಡುವುದಿಲ್ಲ. ತಮಗೆ ಹೇಗೆ ತಿಳಿಯುತ್ತದೆಯೋ ಹಾಗೆ ವರ್ತನೆ ಮಾಡುತ್ತಿದ್ದಾರೆ ಎಂದು ಗ್ರಾಮದ ಮಂದಿ ದೂರು ನೀಡಿದ್ದಾರೆ.


ಪಡಿತರ ರೇಷನ್ ಹಾಗೂ ಕ್ರಿಮಿನಾಶಕ ಪದಾರ್ಥಗಳು ಗೊಬ್ಬರ ಎಣ್ಣೆ ಔಷಧಿ, ಸಿಮೆಂಟ್ ಎಲ್ಲವನ್ನು ಒಟ್ಟಿಗೆ ಇಟ್ಟು ಹಂಚುವುದರಿಂದ ಪರಿಣಾಮ ಏನಾಗುತ್ತದೆ ಎಂಬುದು ಪರಿಜ್ಞಾನವಿಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರಶ್ನಿಸಿದರೆ ನಮ್ಮ ಮೇಲೆಯೇ ರೇಗಾಡುತ್ತಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಸಹಕಾರಿ ಪತ್ತಿನ ಸೊಸೈಟಿಯಲ್ಲಿ ದುಡ್ಡು ಕೊಟ್ಟವರಿಗೆ ಬೀಜ, ಗೊಬ್ಬರ : 

ಸರಕಾರದ ನಿಯಮದ ಪ್ರಕಾರ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜಮೀನುದಾರರಿಗೆ, ಸಂಬಂಧಿಸಿದ ದಾಖಲೆಗಳು ಇದ್ದರೆ ಅವರಿಗೆ ಬೀಜ ಗೊಬ್ಬರ ಕೊಡಬೇಕು. ಆದರೆ ಇವರಿಗೆ ಸಿಗುವುದಿಲ್ಲ. ಈ ನಿಯಮ ಕಡೆಗಣಿಸಿ ಯಾರು ದುಡ್ಡು ಕೊಡುತ್ತಾರೋ, ಅವರಿಗೆ ಬೀಜ ಗೊಬ್ಬರ ಕೊಡುತ್ತಾರೆ. ಇಲ್ಲಿರುವ ಡಿ ದರ್ಜೆ ಕೆಲಸಗಾರ ಕೂಡ ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಾನೆ ಎಂದು ಅಲ್ಲಿಯ ಜನರು ಹೇಳುತ್ತಾರೆ.

ಈ ದಿನ.ಕಾಮ್‌ನೊಂದಿಗೆ ಹಾಳಕೇರಿ ಗ್ರಾಮಸ್ಥ ಮಂಜು ಬುರಡಿ ಮಾತನಾಡಿ, "ಪಡಿತರ ರೇಷನ್ ಹಾಗೂ ಕ್ರಿಮಿನಾಶಕ ಔಷಧಿಗಳು, ಸಿಮೆಂಟ್ ಎಲ್ಲವನ್ನು ಒಂದೇ ಕಡೆ ಶೇಖರಣೆ ಮಾಡಿ, ಸಾರ್ವಜನಿಕರಿಗೆ ಹಂಚಲಾಗುತ್ತಿದೆ. ಅಕಸ್ಮಾತ್ ಎಲ್ಲವೂ ಕಲಬೆರಕೆಯಾದರೆ ಜನರ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಡೆಗಟ್ಟಬೇಕು. ಇಲ್ಲಿರುವ ಈಗಿನ ಅಧಿಕಾರಿಯನ್ನು ಬೇರೆ ಕಡೆ ಕಳುಹಿಸಿ, ಜನರಿಗೆ ಸ್ಪಂದಿಸುವ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ದಿನ.ಕಾಮ್ ನೊಂದಿಗೆ ಗಜೇಂದ್ರಗಡ ಆಹಾರ ಇಲಾಖೆ ಅಧಿಕಾರಿ ಉಮೇಶ್ ಅರಳಿಗಿಡದ ಮಾತನಾಡಿ, "ಈ ವಿಷಯ ಗಮನಕ್ಕೆ ಬಂದಿದ್ದು, ಕೂಡಲೇ ಕ್ರಮ ತೆಗೆದುಕೊಂಡು ಬೇರೆ ಕಡೆ ನ್ಯಾಯಬೆಲೆ ಅಂಗಡಿ ಮಾಡಲು ತಿಳಿಸಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಪಾಯ ಸಂಭವಿಸುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ತಡೆಗಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Post a Comment

Post a Comment