-->
Bookmark

Bengaluru : ಸದ್ದು ಮಾಡುತ್ತಿದೆ “ತಾರಕೇಶ್ವರ” ಟ್ರೇಲರ್

Bengaluru : ಸದ್ದು ಮಾಡುತ್ತಿದೆ “ತಾರಕೇಶ್ವರ” ಟ್ರೇಲರ್
ಬೆಂಗಳೂರ : (Oct_30_2024)

 ಭಕ್ತಿ ಪ್ರಧಾನ ’ತಾರಕೇಶ್ವರ’-'ಅಸುರ ಕುಲತಿಲಕ’  ಅಡಿಬರಹದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. 
ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಎರಡನೇ ಟ್ರೇಲರನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಬಸವರಾಜ ಪಡುಕೋಟೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು. 
       ಪಾತ್ರದ ಕುರಿತು ಗಣೇಶ್‌ರಾವ್ ಕೇಸರ್‌ಕರ್ ಮಾತನಾಡಿ- ನಮ್ಮ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ’ಯು’ ಪ್ರಮಾಣ ಪತ್ರ ನೀಡಿದ್ದಾರೆ. ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ಉತ್ತಮ ಚಿತ್ರವನ್ನು ಕನ್ನಡಿಗರಿಗೆ ಕೊಡಬೇಕೆಂಂದು ನಿರ್ಮಾಣ ಮಾಡಿದ್ದೇನೆ. ಇಲ್ಲಿ ಬಂದಿರುವ ಅತಿಥಿಗಳು ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸೆಟ್‌ನಲ್ಲಿ ಲೈಟಿನ ಕಂಬವು ಕಾಣುವಂತಿಲ್ಲ. ನಿರ್ಮಾಪಕರ ಕಷ್ಟ ಏನೆಂದು ಈಗ ಅರ್ಥವಾಗಿದೆ. ಹೊಸ ಆಲೋಚನೆ ಎನ್ನುವಂತೆ ಈಗಾಗಲೇ ಟಿಕೆಟ್‌ನ್ನು ಮುದ್ರಣ ಮಾಡಿಸಲಾಗಿ, ದರ ನೂರು ರೂಪಾಯಿ ಇರುತ್ತದೆ. ಇದನ್ನು ಖರೀದಿಸಿದವರಿಗೆ ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲಿ ಸಿನಿಮಾ ವೀಕ್ಷಿಸಬಹುದು. ನಿಮ್ಮೆಲ್ಲರ ಪ್ರೋತ್ಸಾಹದಿಂದ ಇಲ್ಲಿಯವರೆಗೂ 333 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದರು.
  ನಿರ್ಮಾಪಕರ ಕೋರಿಕೆಗೆ ಮನ್ನಣೆ ನೀಡಿದ ಆಹ್ವಾನಿತರು ಸ್ಥಳದಲ್ಲೇ  ಅಂದಾಜು  ಐವತ್ತು ಸಾವಿರದಷ್ಟು ಟಿಕೇಟಗಳನ್ನು  ಸಗಟು ಖರೀದಿಸಿದರು. ಹಾಗೂ ಭಾರತೀಯ ಅಂಚೆ ಇಲಾಖೆಯವರು ಹೊರತಂದಿರುವ 'ತಾರಕೇಶ್ವರ’ ಚಿತ್ರ ಇರುವ ಅಂಚೆಚೀಟಿಯನ್ನು ಗಣ್ಯರುಗಳು ಅನಾವರಣಗೊಳಿಸಿದರು. ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಹೇಳುವಂತೆ ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ತೋರಿಸಲಾಗಿದೆ. ಗಣೇಶ್‌ರಾವ್ ಕೇಸರ್‌ಕರ್‌ರವರು ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಹೀಗೆ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.
      ರಾಜನ ಮಗಳು, ಶಿವ ಭಕ್ತೆ, ಪಾರ್ವತಿಯಾಗಿ ರೂಪಾಲಿ ನಾಯಕಿ. ತಾರಕೇಶ್ವರನನ್ನು ಸಂಹಾರ ಮಾಡುವ ಬಾಲ ಸುಬ್ರಹ್ಮಣ್ಯನಾಗಿ ಬಾಲನಟಿ ಋತುಸ್ಪರ್ಶ ಕಾಣಿಸಿಕೊಂಡಿರುವುದು ವಿಶೇಷ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್,ಶ್ರೀವಿಷ್ಣು, ಜಿಮ್‌ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.
      ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿದ್ದಾರೆ. ಸಂಗೀತ ರಾಜ್‌ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್‌ಕುಮಾರ್, ನೃತ್ಯ ಕಪಿಲ್,ಪತ್ರಿಕಾಸಂಪರ್ಕ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ, ನಿರ್ಮಾಣ ನಿರ್ವಹಣೆ ದೀಪಕ್‌ಬಾಬು ನಿರ್ವಹಿಸಿದ್ದಾರೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ:9448775346
Post a Comment

Post a Comment