-->
Bookmark

Karwar : ಮುರಿದು ಬಿದ್ದ ಕಾಳಿ ಸೇತುವೆ: ಕಾರವಾರ - ಗೋವಾ ಸಂಚಾರ ಸ್ಥಗಿತ

Karwar : ಮುರಿದು ಬಿದ್ದ ಕಾಳಿ ಸೇತುವೆ: ಕಾರವಾರ - ಗೋವಾ ಸಂಚಾರ ಸ್ಥಗಿತ
ಕಾರವಾರ: (Aug_07_2024)
ಇಲ್ಲಿನ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದ್ದು, ಲಾರಿಯೊಂದು ನದಿ ಪಾಲಾಗಿದೆ.
ರಾತ್ರಿ 1 ಗಂಟೆ ವೇಳೆಗೆ ಕಾಳಿ ನದಿಯ ಹಳೆಯ ಸೇತುವೆಯು ಮೂರು ಕಡೆಗಳಲ್ಲಿ ಏಕಾಏಕಿ ಮುರಿದು ಬಿದ್ದಿತ್ತು. ಸೇತುವೆ ಮೇಲೆ ಸಾಗುತ್ತಿದ್ದ ಗೋವಾದಿಂದ ಕಾರವಾರ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ. ಲಾರಿ ಚಾಲಕ ಮುರುಗನ್ ಅವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿನ ಕಾಳಿ ನದಿಗೆ ಎರಡು ಸೇತುವೆಗಳಿವೆ. ಗೋವಾ ಕಡೆಯಿಂದ ಕಾರವಾರದತ್ತ ವಾಹನಗಳು ಸಂಚರಿಸುತ್ತಿದ್ದ ಸೇತುವೆಯು ಮುರಿದು ಬಿದ್ದಿದೆ.
ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2009ರಲ್ಲಿ ಸೇತುವೆಯ ಸಂಪೂರ್ಣ ದುರಸ್ತಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಭಾಗಶಃ ಮಾತ್ರ ದುರಸ್ತಿ ನಡೆಸಲಾಗಿತ್ತು.
2018ರಲ್ಲಿ ಇದೇ ಸೇತುವೆ ಪಕ್ಕದಲ್ಲಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯ ಹೊಸ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಸೂಚಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ.
'ಹೆದ್ದಾರಿ ನಿರ್ಮಿಸಿದ ಐ.ಆರ್.ಬಿ ಕಂಪನಿಯು ಹಳೆ ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಸರಿಯಾಗಿ ನಡೆಸಿಲ್ಲ. ಶಿಥಿಲಗೊಂಡಿದ್ದ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಈ ದುರಂತಕ್ಕೆ ಕಾರಣ' ಎಂದು ಶಾಸಕ ಸತೀಶ ಸೈಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ರಸ್ತೆಯ ಎರಡೂ ಕಡೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಸೇತುವೆ ಕುಸಿದು ಬಿದ್ದಿರುವುದನ್ನು ನೋಡಲು ಜನರು ಗುಂಪು ಗುಂಪಾಗಿ ಬರತೊಡಗಿದ್ದಾರೆ.
Post a Comment

Post a Comment