ಅಧರ್ಮ ಅಳಿದು, ಧರ್ಮ ಸಂಸ್ಥಾಪನೆಗೆ ಅವತಾರವೆತ್ತಿದ, ನಿಸರ್ಗ ರಮಣಿಯ ಜಾಳೀಂದ್ರಗಿರಿ ಮಡಿಲ ಅಂತರ ಗಂಗೆಯ ಜಡೆಯಲ್ಲಿ ಕಂಗೊಳಿಸುತ್ತಿರುವ ವಿಶ್ವೇಶ್ವರ, ಕಾಲಭೈರವ, ಕಳಕಮಲ್ಲ ಹೀಗೆ ಹಲವು ನಾಮಾಂಕಿತಗಳಿಂದ ಪೂಜಿಸಲ್ಪಡುವ ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಕಾಲಕಾಲೇಶ್ವರ ಮಹಾ ರಥೋತ್ಸವದಿನದಂದು "ಗದಗವಾಣಿ" ಪ್ರಾದೇಶಿಕ ದಿನಪತ್ರಿಕೆ ಹಾಗೂ "ಅಥರ್ವ ನವೋದಯ ಕೋಚಿಂಗ್ ಸೆಂಟರ್ ವತಿಯಿಂದ ಭಕ್ತಾದಿಗಳಿಗೆ ಉಚಿತವಾಗಿ "ಮಜ್ಜಿಗೆ" ವಿತರಿಸಲಾಯಿತು.
ಗಜೇಂದ್ರಗಡ ಪಟ್ಟಣದಿಂದ 4 ಕಿಮೀ ದೂರದಲ್ಲಿರುವ ಈ ಸುಕ್ಷೇತ್ರವು ಪುರಾತನ, ಪೌರಾಣಿಕ ಇತಿಹಾಸ ಹೊಂದಿದೆ. ಅನೇಕ ಪುರಾತನ ಕೃತಿಗಳಲ್ಲಿ ದಕ್ಷಿಣ ಕಾಶಿಯೆಂದೇ ಉಲ್ಲೇಖಿತವಾಗಿದೆ. ಶ್ರೀಕ್ಷೇತ್ರವು ಜಾಳಿಂದ್ರಗಿರಿಯಲ್ಲಿ ಮಂದಹಾಸ ಬೀರುತ್ತಿರುವ ದ್ರವ್ಯ ಪರಿಮಳ ಭರಿತ ಮಂದಾರ ಪುಷ್ಪದ ತಾಣವೂ ಹೌದು. ಜತೆಗೆ ಪವಾಡ ಸದೃಶವೆನಿಸಿರುವ ಕಳಕಮಲ್ಲಯ್ಯನ ಕ್ಷೇತ್ರ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಬಿರು ಬೇಸಿಗೆಯಲ್ಲಿ ಜಾತ್ರೆ ಜರಗುವುದರಿಂದ ಭಕ್ತರ ಆಯಾಸ ತಣಿಸಲು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ "ಉಚಿತ ಮಜ್ಜಿಗೆ" ಯನ್ನು ವಿತರಿಸಲಾಯಿತು.
ಕಾಲಕಾಲೇಶ್ವರ ದೇವಸ್ಥಾನ ಅರ್ಚಕ ಮಲ್ಲಯ್ಯ ಪೂಜಾರ ಮಾತನಾಡಿ, ಹಸಿದವರು ಹಾಗೂ ದಣಿವಾಗಿ ಬಂದವರಿಗೆ ಆಹಾರ, ಮಜ್ಜಿಗೆ ಹಾಗೂ ನೀರು ಕೊಟ್ಟರೆ ದೇವರು ಸಂತೃಪ್ತನಾಗುತ್ತಾನೆ ಎಂದು ಹೇಳಿದರು.
ಜನ ಕಾಣದ ದೇವರನ್ನು ಹುಡುಕಿಕೊಂಡು ಹೋಗಿ ಎಳನೀರು, ಬೆಣ್ಣೆ, ತುಪ್ಪ ಅಭಿಷೇಕ ಮಾಡುವ ಮೂಲಕ ಆಹಾರ ಪದಾರ್ಥ ವ್ಯರ್ಥ ಮಾಡುತ್ತಾರೆ. ಆದರೆ, ಅದೇ ಆಹಾರವನ್ನು ಹಸಿದವರು, ಬಡವರು ಹಾಗೂ ಅಸಹಾಯಕರಿಗೆ ನೀಡಿದರೆ ಅದು ದೇವರಿಗೆ ನೀಡಿದಂತೆ ಎಂದು ತಿಳಿಸಿದ ಅವರು, ಉಳ್ಳವರು ಹಣ ಕೊಟ್ಟು ತಂಪು ಪಾನೀಯ ಕುಡಿಯುತ್ತಾರೆ. ಆದರೆ, ಬಡವರಿಗಾಗಿ " ಗದಗವಾಣಿ " ಪ್ರಾದೇಶಿಕ ದಿನಪತ್ರಿಕೆ ಹಾಗೂ "ಅಥರ್ವ ನವೋದಯ ಕೋಚಿಂಗ್ ಸೆಂಟರ್ " ವತಿಯಿಂದ ಉಚಿತ ಮಜ್ಜಿಗೆ ವಿತರಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಗದಗವಾಣಿ ಸಂಪಾದಕ ಮಂಜುನಾಥ ರಾಠೋಡ, ಉಪ ಸಂಪಾದಕ ಅಲ್ಲಾಭಕ್ಷಿ ನಧಾಪ ಮಾತನಾಡಿ, ಜನ ಯಾವಾಗಲೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಬೇಕೆಂದರೆ ಉಳ್ಳವರು ಇಲ್ಲದವರಿಗೆ ನೆರವಾಗಬೇಕು ಎಂದು ತಿಳಿಸಿದರು.
ಪತ್ರಕರ್ತರಾದ ವೀರಣ್ಣ ಸಂಗಳದ ಮತ್ತು ಮಂಜುನಾಥ ಕುದರಿಕೋಟಿ ಮಾತನಾಡಿ,
ಪ್ರಸಕ್ತ ವರ್ಷ ವಿಪರೀತ ಬಿಸಿಲು ಇರುವ ಕಾರಣ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣದಿಂದ ಬೈನ್ ಸ್ಟೋಕ್ ಆಗುವ ಸಾಧ್ಯತೆ ಹೆಚ್ಚು. ಅಂತಹವರಿಗೆ ಮಜ್ಜಿಗೆ, ನೀರಿನ ಅವಶ್ಯಕತೆಯಿದೆ. ಹಾಗಾಗಿ, ಉಚಿತ ಸೇವೆ ಒದಗಿಸಲಾಗುತ್ತಿದೆ ಎಂದರು.
ಇದೇ ವೇಳೆ ವೆಂಕಟೇಶ ಹಿರೇಮನಿ, ಪರಶುರಾಮ ರಾಠೋಡ, ಮೌನೇಶ ವಿಶ್ವಬ್ರಾಹ್ಮಣ, ಪರಶುರಾಮ ಮಾದರ, ರವಿ ನಿಡಗುಂದಿ ಸೇರಿದಂತೆ ಇತರರು ಇದ್ದರು.
Post a Comment