ಲಂಬಾಣಿ ಸಮುದಾಯದ ಸಂಸ್ಕೃತಿ ಅನನ್ಯ
ಕಲಾ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿರುವ ಲಂಬಾಣಿ ಸಮುದಾಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂದು ಶಿಕ್ಷಕರಾದ ತಿಪ್ಪಾ ನಾಯ್ಕ್ ಎಲ್. ಅಭಿಪ್ರಾಯಪಟ್ಟರು.
ನಗರದ ಜನತಾ ಪ್ಲಾಟ್‌ನ ಬಂಜಾರ ಸಮುದಾಯ ಭವನದಲ್ಲಿ ಭಾನುವಾರ ನಡೆದ 'ಅಕ್ಷರ ಸಂಗಾತ'ದ ಏಪ್ರಿಲ್ ಸಂಚಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅಳು ನುಂಗಿ ನಗುವ ಹಾಗೆ ಮಾಡಿದ ಜಗತ್ತಿನ ಅಪ್ರತಿಮ ನಟ ಚಾರ್ಲಿ ಚಾಪ್ಲಿನ್ ಲಂಬಾಣಿ ಸಮುದಾಯದವರಾಗಿದ್ದರು. ಚಾಪ್ಲಿನ್ ಪ್ರಭುತ್ವದ ವಿರುದ್ಧ ಬಂಡೇಳುವ ವ್ಯಕ್ತಿತ್ವ ಹೊಂದಿದ್ದರು. ಜನ ಸಾಮಾನ್ಯರ ಪರವಾಗಿದ್ದ ಅವರ ನಟನೆ ಮಂತ್ರಮುಗ್ಧಗೊಳಿಸುತ್ತಿತ್ತು. ಅಂತಹ ಮೇರು ನಟನನ್ನು ಕೊಟ್ಟ ಕೀರ್ತಿ ಲಂಬಾಣಿ ಸಮುದಾಯಕ್ಕೆ ಸಲ್ಲಬೇಕು ಎಂದರು.
‘ಅಕ್ಷರ ಸಂಗಾತ’ದ ಏಪ್ರಿಲ್ ಸಂಚಿಕೆ ಸಾಂಪ್ರದಾಯಿಕ ಧಿರಿಸು ಧರಿಸಿರುವ ಲಂಬಾಣಿ ಮಹಿಳೆಯ ಚಿತ್ರವನ್ನು ಮುಖಪುಟವಾಗಿ ಬಳಸಿಕೊಂಡು ಬುಡಕಟ್ಟು ಸಮುದಾಯದ ಅಸ್ಮಿತೆಯನ್ನು ಗೌರವಿಸಿದೆ ಎಂದು ಅಭಿಪ್ರಾಯಪಟ್ಟರು.
‘ಅಕ್ಷರ ಸಂಗಾತ’ ಸಾಹಿತ್ಯ ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ಮಾತನಾಡಿ, ನಗರೀಕರಣದ ಈ ದಿನಗಳು ಬುಡಕಟ್ಟು ಸಮುದಾಯಗಳ ಪರಂಪರೆ, ಅವುಗಳ ಸಾಂಸ್ಕೃತಿಕ ಮಹತ್ವವನ್ನು ಮರೆಯಾಗಿಸುತ್ತಿವೆ. ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯನ್ನು ನೆನಪಿಸುವ ಪ್ರಯತ್ನದ ಭಾಗವಾಗಿ ಬಂಜಾರ ಸಮುದಾಯದ ಸಾಂಪ್ರದಾಯಿಕ ಧಿರಿಸು ಧರಿಸಿರುವ ಲಂಬಾಣಿ ಮಹಿಳೆಯ ಚಿತ್ರವನ್ನು ಮುಖಪುಟವಾಗಿ ಬಳಸಿಕೊಂಡಿದ್ದೇವೆ. ತಾಂಡಾದ ಲಂಬಾಣಿ ಸಮುದಾಯದ ನಡುವೆ ಈ ಸಂಚಿಕೆಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಜನರಿದ್ದ ಕಡೆಗೆ ಪತ್ರಿಕೆ ಚಲಿಸುತ್ತಿದೆ. ಆ ಮೂಲಕ ಜನ ಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಯತ್ನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಾ ರಾಠೋಡ್, ಶಂಕರ್ ರಾಠೋಡ್, ಮಹಾಂತೇಶ ಹಿರೇಕುರಬರ, ವಿಠ್ಠಲ್ ನಾಯ್ಕ್, ನಾರಾಯಣಪ್ಪ ಕಾರಭಾರಿ, ಲಕ್ಷ್ಮಣ ಮಾಳೋತ್ತರ, ಕೃಷ್ಟಪ್ಪ ಈಶ್ವರಪ್ಪ ರಾಠೋಡ್, ಗೊರಿಯಪ್ಪ ಮಾಳೋತ್ತರ, ನಾರಾಯಣಪ್ಪ ರಾಮಪ್ಪ ಅಜ್ಮೀರ್, ಪರಸಪ್ಪ ಲಚಮಪ್ಪ ರಾಠೋಡ, ದೇವಪ್ಪ ಯಂಕಪ್ಪ ರಾಠೋಡ, ಸುರೇಶ ಅಜ್ಮೀರ, ಮಾರುತೆಪ್ಪ ರಾಠೋಡ್, ನಾಗರಾಜ್ ಗುಗಲೋತ್ತರ್, ಶಂಕರ್ ಚವ್ಹಾಣ್
ಮೊದಲಾದವರು ಇದ್ದರು.
Post a Comment