-->
Bookmark

Naregal : ಸೇವಾಲಾಲರಿಗೆ ಹುಟ್ಟು ಇದೆ ಆದರೆ ಸಾವು ಇಲ್ಲ

*ಸೇವಾಲಾಲರಿಗೆ ಹುಟ್ಟು ಇದೆ ಆದರೆ ಸಾವು ಇಲ್ಲ

*ಪಂಚಭೂತಗಳ ಮಹತ್ವ ಜನರಿಗೆ ಉಣಬಡಿಸಿದ ಸಂತ
*ಸರ್ವಕಾಲಕ್ಕೂ ಶ್ರೇಷ್ಠರು ಸೇವಾಲಾಲರು

(ಶ್ರೀ ಸೇವಾಲಲ್ ಮಹಾರಾಜರ ಜಯಂತಿ ಅಂಗವಾಗಿ ವಿಶೇಷ ಲೇಖನ)

ನರೇಗಲ್ : (Feb_14_2024)

ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು ಬಡತನ, ಅನಕ್ಷರತೆಳಿಂದ ಅರಣ್ಯವಾಸಿಗಳಾಗಿ ಶ್ರಮಿಕ ಜೀವನ ನಡೆಸುತ್ತಿದ್ದಾರೆ. ಮೊಘಲರ ದಾಳಿಯಿಂದಾಗಿ ಭಾರತದ ತುಂಬೆಲ್ಲ ಅಲ್ಲಲ್ಲಿ ಚದುರಿಕೊಂಡಿದ್ದಾರೆ. ಈಗ ಪ್ರಪಂಚದಾದ್ಯಂತ 113 ದೇಶಗಳಲ್ಲಿ ಹೆಮ್ಮೆಯ ಭಾರತೀಯರಾಗಿ ದುಡಿಯುತ್ತಿದ್ದಾರೆ. ತಂತ್ರಜ್ಞಾನದ ಆಧುನಿಕತೆಯ ಅನೇಕತೆಯಲ್ಲಿ ಏಕತೆಯನ್ನು ಸಾರುವಂತೆ ಒಂದೇ ತೆರನಾದ ಆಚಾರ, ವಿಚಾರ, ಭಾಷೆ, ಉಡಿಗೆ-ತೊಡಿಗೆಗಳಿಂದ ಬಹು ಬೇಗ ಗುರುತಿಸಲ್ಪಡುವ ಜಗತ್ತಿನ ಏಕೈಕ ಭಾರತೀಯ ಹಿಂದುಳಿದ ಬುಡಕಟ್ಟು ಜನಾಂಗ ಎಂದರೆ ಲಂಬಾಣಿಗರು ಅಥವಾ ಬಂಜಾರರು ಎಂದು ಹೇಳಿದರೆ ತಪ್ಪಾಗಲಾರದು.
ಬುದ್ಧ, ಬಸವಣ್ಣ, ಕನಕದಾಸ, ಕಬಿರದಾಸ, ಸರ್ವಜ್ಞರಂತೆ ಭಾರತ ದೇಶದಲ್ಲಿ ಕಾಡಿನಲ್ಲಿ ವಾಸ ಮಾಡುತ್ತಿದ್ದ ಪರಿಸರ ಪರಿವಾರದ ಬಡ ಬುಡಕಟ್ಟು ಜನಾಂಗದಲ್ಲಿಯೂ 17ನೇ ಶತಮಾನದಲ್ಲಿ ಒಬ್ಬ ಸಮಾಜ ಸುಧಾರಕನ ಜನ್ಮವಾಗುತ್ತದೆ ಅವರೇ ಸೇವಾಲಾಲರು. ಮದುವೆಯಾಗಿ 12 ವರ್ಷಗಳಾದರು ಸಂತಾನ ಭಾಗ್ಯ ಇಲ್ಲದೆ ಇರುವಾಗ ಭವಾನಿ ಮರಿಯಮ್ಮನ ಭಕ್ತರಾದ ತಂದೆ ಭೀಮಾನಾಯ್ಕರ ಕಾಯಕನಿಷ್ಠೆಗೆ ಹಾಗೂ ತಾಯಿ ಧರ್ಮಣಿಬಾಯಿಯವರ ಧೈವ ಭಕ್ತಿಗೆ ಮೆಚ್ಚಿ ಪ್ರತಕ್ಷಳಾಗುವ ದೇವಿ ವರ ನೀಡಲು ಮುಂದಾಗುತ್ತಾಳೆ. ಆದರೆ ಅಲ್ಲೊಂದು ಷರತ್ತು ಹಾಕುತ್ತಾಳೆ, ಅದೆನೆಂದರೆ ನನ್ನ ಮಗನು ನಿಮ್ಮ ಗರ್ಭದಲ್ಲಿ ಜನಿಸುತ್ತಾನೆ. ಅವನು ಪ್ರೌಢಾವಸ್ಥೆಗೆ ಬಂದಮೇಲೆ ಸಮಾಜ ಸೇವೆಗಾಗಿ ತಂದೆ ತಾಯಿಗಳಾದ ನಿವು ಅರ್ಪಿಸಬೇಕು ಎಂದು..! ಮಗ ಹುಟ್ಟುತ್ತಾನೆ ಎಂಬ ಸಂತೋಷದಲ್ಲಿ ತಂದೆ-ತಾಯಿ ಷರತ್ತಿಗೆ ಒಪ್ಪಿಗೆ ಸೂಚಿಸುತ್ತಾರೆ.  ದೇವಿಯ ಆಶೀರ್ವಾದದ ಮೂಲಕ ಧರ್ಮಣಿಬಾಯಿ ಒಡಲಲ್ಲಿ ಗಂಡು ಮಗುನಿನ ಜನನವಾಗುತ್ತದೆ. ಇಲ್ಲಿ ವಿಚಿತ್ರವೆಂದರೆ ಆ ಮಗು ಪರಮಾತ್ಮ ಶ್ರೀಕೃಷ್ಣನು ಜನ್ಮ ಪಡೆದ ಸಮಯಕ್ಕೆ, ದಿನಕ್ಕೆ ಹೊಲಿಕೆಯಾಗುವಂತೆ ಜನ್ಮ ಪಡೆದಿರುತ್ತದೆ. ಅಂದರೇ ದೈವ ಶಕ್ತಿಯಿಂದ ಜನ್ಮ ಪಡೆದ ಮಗುವಿನ ಕುಂಡಲಿಯೂ ದೇವರ ಕುಂಡಲಿಗೆ ಸಮನಾಗಿರುತ್ತದೆ. ಸೇವಾಲಾಲರು ಪ್ರಕೃತಿಯ ಮಡಿಲಲ್ಲಿ ಅಂದರೆ ಈಗಿನ ದಾವಣಗೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ, ಶಿವಮೊಗ್ಗ ಸಮೀಪದ ಭಾಯಘಡದಲ್ಲಿ (ಸೂರಗೊಂಡಕೊಪ್ಪದಲ್ಲಿ) ಅದು ಗುಡ್ಡದ ಪ್ರದೇಶದಲ್ಲಿ ಫೆಬ್ರವರಿ 15, 1739 ರಂದು ಜನ್ಮವಾಗುತ್ತದೆ.
ಮಗುವಿನ ನಾಮಕರಣದ ಸಂದರ್ಭದಲ್ಲಿ ಮಾರುವೇಷದಲ್ಲಿ ಬರುವ ಮರಿಯಮ್ಮ ದೇವಿ ’ಸೇವಾ ಭಾಯಾ’ (ಸೇವಾಲಾಲ) ಎಂದು ನಾಮಕರಣ ಮಾಡುತ್ತಾಳೆ. ಇದರ ಅರ್ಥ ’ಸಮಾಜ ಸೇವೆಗಾಗಿ ಜನ್ಮಿಸಿದವ’ ಎಂದು. ಭಾಯಾ ಸದಾ ಗೋವು, ಕುರಿ, ಆಡುಗಳನ್ನು ಮೇಯಿಸುತ್ತಾ ಪರಿಸರದ ಮಡಿಲಲ್ಲಿ ಬೆಳೆಯುತ್ತಾನೆ. ಸದಾ ಸಂತೋಷದಿAದ ಎಲ್ಲರೊಂದಿಗೆ ಬೆರೆತಿರುತ್ತಾನೆ. ಪ್ರೌಢಾವಸ್ಥೆಗೆ ಬಂದಮೇಲೆ ಒಂದು ದಿನ ಪ್ರತ್ಯಕ್ಷಳಾಗುವ ಮರಿಯಮ್ಮ ದೇವಿ ಸಮಾಜ ಸೇವೆಗೆ ಬರುವಂತೆ ಸೇವಾ ಭಾಯಾರನ್ನು ಆಹ್ವಾನಿಸುತ್ತಾಳೆ. ಆಗ ನಾನ್ಯಾಕೆ ಬರಲಿ, ನನಗೆ ಅಪ್ಪ, ಅಮ್ಮ, ಸಂಬಂಧಿಕರು, ಕುರಿಗಳು, ಗೋವುಗಳು ಎಲ್ಲಾ ಇವೆ. ಅವುಗಳನ್ನು ಬಿಟ್ಟು ಬರುವುದಿಲ್ಲ ಎಂದು ಹಠ ಮಾಡುತ್ತಾನೆ. ಹಾಗೂ ತಿರಸ್ಕರಿಸಿ ಕಳುಹಿಸುತ್ತಾನೆ. ಆಗ ಸೇವಾಲಾಲರು ನೋವು, ಕಷ್ಟಗಳಿಗೆ ಒಳಗಾಗುತ್ತಾರೆ. ಪ್ರೀತಿಯ ಕುರಿಗಳನ್ನು, ಟಗರನ್ನು, ಸಹೋದರರನ್ನು ಕಳೆದುಕೊಂಡು ತುಂಬಾ ದುಃಖಿತನಾಗುತ್ತಾನೆ. ಹೀಗಿರಯವಾಗ ಕಾಡಿನ ಪ್ರಕೃತಿಯ ವಿಷ್ಮಯದಲ್ಲಿ ನೋವಿನಲ್ಲಿ ಕುಳಿತಿರುವಾಗ ಜ್ಞಾನೋದಯವಾಗುತ್ತದೆ ಹಾಗೂ ದೇವಿ ಮರಿಯಮ್ಮ ಮತ್ತೇ ಪ್ರತ್ಯಕ್ಷಳಾಗಿ ಸೇವಾಲಾಲರ ಜನ್ಮದ ರಹಸ್ಯವನ್ನು ತಿಳಿಸುತ್ತಾಳೆ.
  ಆಗ ದೇವಿಯೂ ಸಮಾಜ ಸೇವೆಗೆ ಹೊರಡುವಂತೆ ಸೂಚಿಸುತ್ತಾಳೆ. ಆದರೆ ಸೇವಾಲಾಲರು ಮೂರು ವರಗಳನ್ನು ಬೇಡುತ್ತಾರೆ. ಮೊದಲನೇಯದು ಕುರಿ, ಟಗರು, ಹಸುಗಳನ್ನು ಮರಳಿ ನೀಡುವಂತೆ, ಎರಡನೇಯದು ತನ್ನನ್ನು ಪ್ರೀತಿಸುತ್ತಿದ್ದ ಸಹೋದರರನ್ನು ಮರಳಿ ನೀಡುವಂತೆ ಹಾಗೂ ಕೊನೆಯ ಬಹುಮುಖ್ಯ ವರವೆಂದರೆ ’ದೇವಿ ಸದಾ ನೀನು ನನ್ನೊಂದಿಗೆ ಇರಬೇಕು’. ಅಂದರೆ ನನ್ನಿಂದ ಯಾವತ್ತು ಸುಳ್ಳು, ಮೋಸ, ವಂಚನೆ ಅಪಪ್ರಚಾರದ ಮಾತುಗಳು, ಮೂಢನಂಬಿಕೆಯ ಮಾತುಗಳು ಬರದಂತೆ ನನ್ನ ಮಾತುಗಳನ್ನು ಆಡಿಸಬೇಕು ಎಂದು. ಅದಕ್ಕಾಗಿ ನೀನು ನನ್ನ ನಾಲಿಗೆಯ ಮೇಲೆ ವಾಸ ಮಾಡಬೇಕು ನಾನು ಯಾವತ್ತಿಗೂ ಜನರಿಗೆ ಸತ್ಯವನ್ನು ನುಡಿಯಬೇಕು ಎಂದು ದೇವಿಯಲ್ಲಿ ಪ್ರಾರ್ಥನೆಯ ರೂಪದಲ್ಲಿ ಬೇಡಿಕೊಳ್ಳುತ್ತಾನೆ. ಒಪ್ಪಿಗೆ ಸೂಚಿಸಿ ಆಶೀರ್ವದಿಸುವ ದೇವಿ ಸೇವಾಲಾಲರ ನಾಲಿಗೆಯ ಮೇಲೆ ವಾಸ ಮಾಡುತ್ತಾಳೆ ಅಂದಿನಿಂದ ಸೇವಾಲಾಲ ಹೆಸರು ‘ಸತ್ಯ ಸೇವಾಲಾಲ’ ಅಥವಾ ಸತ್ಯವಾನ್ ಸೇವಾಲಾಲ ಎಂದು ಪ್ರಚಾರ ಗೊಳ್ಳುತ್ತದೆ. ಬಂಜಾರರ ಭಜನೆಯ ಆರಂಭದಲ್ಲಿ ಈ ನುಡಿ ಇರುತ್ತದೆ. ಅಂದರೆ ಸತ್ಯವಾನ್ ಸೇವಾಲಾಲ ಮಹಾರಾಜ್ ಕೀ ಜೈ ಎಂದು ಹೇಳುವ ಮೂಲಕ ಆರಂಭವಾಗುತ್ತದೆ.

ಅಲ್ಲಿಂದ ಸಮಾಜ ಸುಧಾರಣೆಗೆ ಹೊರಟ ಸತ್ಯ ಸೇವಾಲಾಲರು ಸರ್ವಸ್ವವನ್ನು ತ್ಯಾಗ ಮಾಡಿ, ಸನ್ಯಾಸತ್ವ ಸ್ವೀಕರಿಸುತ್ತಾರೆ. ತಮ್ಮ ಗೌರಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸುತ್ತಾರೆ.  ಸಹೋದರತ್ವದ, ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಾರೆ. ತಮ್ಮ ಸತ್ಯ ವಾಣಿಯ ಮೂಲಕ ಜಗತ್ ಪ್ರಸಿದ್ಧಿ ಪಡೆಯುತ್ತಾರೆ. ಆಂಧ್ರಪ್ರದೇಶ, ರಾಜಸ್ಥಾನ, ಓಡಿಸಾ, ಪಂಜಾಬ್, ಅಪಘಾನಿಸ್ಥಾನ, ರಾಜಸ್ಥಾನ ಹೀಗೆ ಜಗತ್ತನ್ನು ಸುತ್ತಿ ಮಹಾರಾಷ್ಟ್ರಕ್ಕೆ ಬಂದು ನೆಲೆಸುತ್ತಾರೆ.
ಸಮಾಜವು ಹಲವಾರು ಅಜ್ಞಾನಗಳು, ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್‌ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ. ಅವರು ಭೂಮಿಯನ್ನು ತಾಯಿಯೆಂದು, ನಿಸರ್ಗವನ್ನು ದೇವರೆಂದು ಆರಾಧಿಸಿದರು. ಪಂಚಭೂತಗಳ ವಿಶೇಷ ಮಹತ್ವ ಜನರಿಗೆ ಉಣಬಡಿಸಿದರು. ಅಂದರೆ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವೇ ದೇವರು ಎಂದು ಸಾರಿದರು. ಇಂದಿಗೂ ಬಂಜಾರ ಸಮಾಜದಲ್ಲಿ ಭೋಗ್(ಅಗ್ನಿ) ಹಚ್ಚುವುದನ್ನು ಕಾಣುತ್ತೇವೆ. ಅಂದರೆ ಬೆಂಕಿಯನ್ನು ಪೂಜಿಸುತ್ತಾರೆ. ನೀರನ್ನು ದುಡ್ಡು ಕೊಟ್ಟು ಖರೀದಿಸುವ ಕಾಲ ದೂರವಿಲ್ಲ ಎಂದು 17ನೇ ಶತಮಾನದಲ್ಲಿ ಹೇಳಿದ್ದರು. ಪರಿಸರ ಸಂರಕ್ಷಣೆ ಆಗಬೇಕಾದರೆ ಪರಿಸರದ ಮಡಿಲಲ್ಲಿ ಬೆಳೆಯಬೇಕು ಎಂದು ಹೇಳಿದ್ದರು ಪೂಜ್ಯ ಸೇವಾಲಾಲರು. ಅಷ್ಟೇ ಅಲ್ಲದೆ, ಬಂಜಾರ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವಂತೆ ಸ್ಪೂರ್ತಿ ತುಂಬಿದರು. ಗುರು, ಹಿರಿಯರ ಮಾತಿಗೆ ಗೌರವ ನೀಡುವ ಸಂಸ್ಕಾರವನ್ನು ಯುವಕರಿಗೆ ನೀಡಿದರು. ಈ ನಿಟ್ಟಿನಲ್ಲಿ ಆಧುನಿಕತೆಯ ನಡುವೆಯೂ ನಮ್ಮತನ ಕಳೆದುಕೊಳ್ಳದೇ ಸಮಾಜದ ಹಿರಿಮೆಯನ್ನು ಇವತ್ತಿಗೂ ಎತ್ತಿ ಹಿಡಿದಿದೆ ಎನ್ನಬಹುದು. ಈ ಸಮಾಜದಲ್ಲಿ ಇಂದಿಗೂ ನಾಯಕ (ನ್ಯಾಯಾಧೀಶ), ಕಾರಬಾರಿ (ಲೆಕ್ಕಪರಿಶೋಧP), ಗಾವಣ (ಸಂಸ್ಕೃತಿಯ ಕುರಿತು ಹಡುವ ಸಾಹಿತಿ),  ಡಾವ್(ಗುರು-ಹಿರಿಯರು) ಎಂದು ಅರ್ಥ ಈ ಸಂಸ್ಕೃತಿ ತಾಂಡಾಗಳಲ್ಲಿ ಇನ್ನೂ ಜೀವಂತವಾಗಿದೆ. ಬಂಜಾರ ಜನಾಂಗದ ಪಂಚಾಯತ್ ಕಟ್ಟೆಯನ್ನು ನಾವು ಇಂದು ಸಂವಿಧಾನದಲ್ಲಿಯೂ ಕಾಣುತ್ತೇವೆ. ಇದು ಈ ಜನಾಂಗದ ಬಹುದೊಡ್ಡ ಕೊಡುಗೆಗಳಲ್ಲಿ ಒಂದು. ದೇಹಲಿಯ ಕೆಂಪುಕೋಟೆಯನ್ನು ಕಟ್ಟಿಸಿರುವ ಜಾಗ ಭರತ ಮಾತೆಯ ವೀರ ಪೂತ್ರ ಲಕ್ಷ್ಮೀಷಾ ಬಂಜಾರನಿಗೆ ಸೇರಿದ್ದು ಎಂಬುವುದು ಸಹ ಹೆಮ್ಮೆಯ ವಿಷಯವಾಗಿದೆ ಅಂದರೆ ಅಲ್ಲಿ ಬಂಜಾರರ ತಾಂಡಾ ಇತ್ತು ಎಂದು ತೋರಿಸಿ ಕೊಡುತ್ತದೆ ಎಂದು ಅರ್ಥವಾಗುತ್ತದೆ.
ಇವರಿಗೆ ಸವಾಲು ಹಾಕಿದ್ದ ಹೈದ್ರಾಬಾದ್ ನವಾಬನು ಸೋತನು ನಂತರ ಹೈದ್ರಾಬಾದ್ ಪ್ರಾಂತ್ಯದಲ್ಲಿ ಅವನ ಆಳ್ವಿಕೆಯಲ್ಲಿದ್ದ  ಅಲ್ಲಿನ ಒಂದು ಭಾಗ ಜಾಗವನ್ನು ಮರಳಿ ಹಿಂದುಗಳಿಗೆ ನೀಡುತ್ತಾನೆ. ಈಗ ಆ ಪ್ರದೇಶ ಭಾರತ ದೇಶದದೇಶದ ಅತ್ಯಂತ ಬೆಲೆ ಬಾಳುವ ಪ್ರದೇಶವಾಗಿದೆ. ಅದೇ ’ಹೈದ್ರಾಬಾದ್‌ನ ಬಂಜಾರ ಹಿಲ್ಸ್’. ತೆಲಗು ನಾಡಿನ ಪ್ರತಿ ಮೂವಿಯಯಲ್ಲಿ ಹಾಗೂ ಧಾರಾವಾಹಿ ಚಿತ್ರಿಕರಣದಲ್ಲಿಯೂ ಇಲ್ಲಿನ ದೃಶ್ಯಗಳು ಇದ್ದೇ ಇರುತ್ತವೆ. ಲೋಕ ಸಂಚಾರದಲ್ಲಿ ಇರುವಾಗ ಸೇವಾಲಾರನ್ನು ಪರೀಕ್ಷಿಸಲು ಪುರುಷನೊಬ್ಬ್ಬ ಸೀರೆ ಉಟ್ಟಿಕೊಂಡು ಬಂದು ನನಗೆ ಮದುವೆಯಾಗಿ ಬಹಳ ದಿನವಾಗಿವೆ ಆದರೆ ಮಕ್ಕಳಾಗಿಲ್ಲ, ಮಕ್ಕಳಾಗುವಂತೆ ಆಶೀರ್ವಾದ ಮಾಡುವಂತೆ ಬೇಡುತ್ತಾನೆ. ಸೇವಾಲಾಲರು ವಿಚಾರ ಮಾಡಿ ವರ ಕೇಳು, ಮತ್ತೇ ಮರಳಿ ಬದಲಾವಣೆಯಾಗುವುದಿಲ್ಲ ನಿನ್ನ ಪ್ರಕೃತಿಯಲ್ಲಿ ಎಂದು ಹೇಳುತ್ತಾರೆ. ಆಗ ಹಠ ಹಿಡಿಯುವ ಯುವಕನಿಗೆ ಮಕ್ಕಳಾಗುವ ವರ ಆಶೀರ್ವದಿಸಿ ಹೋಗುತ್ತಾರೆ. ಆ ಮೇಲೆ ಪುರುಷನೊಬ್ಬ ಮಹಿಳೆಯಾಗಿ ಗೊತ್ತಿಲ್ಲದಂತೆ ಬದಲಾಗುತ್ತಾನೆ. ಮುಂದೆ ಮುರು ತಿಂಗಳ ನಂತರ ಗರ್ಭ ಧರಿಸುತ್ತಾನೆ ಹಾಗೂ 9 ತಿಂಗಳ ನಂತರ ಮಗುವಿನ ಜನ್ಮವಾಗುತ್ತಾನೆ ಇದು ಅವರ ಪವಾಡಗಳಲ್ಲಿ ಒಂದಾಗಿದೆ. ಹೀಗೆ ಅವರು ಹೇಳಿದ ಯಾವ ಮಾತು ಸಹ ಹುಸಿ ಹೋಗಿರುವುದಿಲ್ಲ.
ಸತ್ಯ ಸೇವಾಲಾಲರ ಚರಿತ್ರೆಯನ್ನು ಆಳವಾಗಿ ಓದಿದಾಗ ನಮಗೆ ಒಂದು ವಿಷಯ ತಿಳಿಯುತ್ತದೆ. ಸೇವಾಲಾಲರಿಗೆ ’ಹುಟ್ಟು ಇದೆ ಆದರೆ ಸಾವು ಇಲ್ಲ’. ಅದು ಹೇಗೆಂದರೆ ಸೇವಾಲಾಲರು ಗುರುವನ್ನು ಮೀರಿಸಿದ ಶಿಷ್ಯರಾದರು. ದೇವಿ ಮರಿಯಮ್ಮನ ಆಶೀರ್ವಾದದಿಮದ ಜನ್ಮ ಪಡೆದ ಇವರು ಭರತ ಖಂಡದಲ್ಲಿ ಹೆಸರುವಾಸಿಯಾದರು. 17ನೇ ಶತಮಾನದ ಎಲ್ಲೆಡೆ ಸೇವೆಲಾಲರ ನುಡಿಗಳು ಹರಿದಾಡಿದವು. ಆಗ ದೇವಿಯ ನಾಮಸ್ಮರಣೆ ಜನರಲ್ಲಿ ಕಡಿಮೆ ಆಯಿತು. ದೇವಿಯ ಭಕ್ತನಾದ ಸೇವಾಲಲರ ಸ್ಮರಣೆ ಹೆಚ್ಚಾಗುತ್ತಾ ಬಂದಿತು. ಆದರೆ ಸೇವಾಲಾಲರು ತಾವು ಮಾಡುತ್ತಿದ್ದ ದೇವಿಯ ಪೂಜೆ, ಶ್ರದ್ಧೆಯಲ್ಲಿ ಎಂದಿಗೂ ಕಡಿಮೆ ಆಗಿರಲಿಲ್ಲ. ಆದರೂ ದೇವಿಯಲ್ಲಿ ಸೇವಾಲಾರನ್ನು ಪರೀಕ್ಷಿಸಬೇಕು ಎಂಬ ಆಸೆ ಹುಟ್ಟುತ್ತದೆ.  ಒಂದು ದಿನ ಸೇವಾಲಾಲರಿಗೆ ಸ್ವರ್ಗದಿಂದ ಪರಮಾತ್ಮ ಶಿವನ ಕರೆ ಬರುತ್ತದೆ ಹಾಗೂ ಸ್ವರ್ಗಕ್ಕೆ ಬರುವಂತೆ ಆಹ್ವಾನ ಬರುತ್ತದೆ. ಆಗ ಸೇವಾಲಾಲರು ಭಕ್ತರಿಗೆ ತಿಳಿಸುತ್ತಾರೆ. ಪರೀಕ್ಷೆಯ ಕಾಲವೊಂದು ಬಂದಿದೆ ಆದರೆ ಈ ಪರೀಕ್ಷೆಯಲ್ಲಿ ನಾನು, ನೀವು ಎಲ್ಲರೂ ಪಾಸಾಗಬೇಕು. ಇದರಲ್ಲಿ ಭಕ್ತರಾದ ನಿಮ್ಮ ತಾಳ್ಮೆ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾರೆ. ನಾನು ಪರಮಾತ್ಮನ ಸಿದ್ಧಿಗಾಗಿ ತಪಸ್ಸಿಗೆ ಕುಳಿತುಕೊಳ್ಳುತ್ತೇನೆ. ಮರಳಿ ನಾನೇ ಮೇಲೆಳುವವರೆಗೂ ಯಾರು ನನ್ನ ತಪಸ್ಸಿಗೆ ತೊಂದರೆಯನ್ನು ನೀಡದಿರಿ ಎಂದು ಹೇಳುತ್ತಾರೆ. ಮಹಾರಾಷ್ಟ್ರದ ಪೌರಾದೇವಿ ಶಕ್ತಿಪೀಠದಲ್ಲಿ ತಪಸ್ಸಿಗೆ ಕುಳಿತಾಗ ಜನರು ಭಜನೆ ಮಾಡಲು ಆರಂಭಿಸುತ್ತಾರೆ. ಇದೇ ಸಂದರ್ಭದಲ್ಲಿ ದೇವಿ ಮೂರು ದಿನಗಳ ನಂತರ ಮುದುಕಿಯ ವೇಶದಲ್ಲಿ ಬಂದು ಜನರಿಗೆ ಹೀಗೆ ಹೇಳಿ ಮನಸ್ಸು ಬದಲಿಸುತ್ತಾಳೆ. ’ತಪಸ್ಸಿಗೆ ಕುಳಿತ ವ್ಯಕ್ತಿ ಮೂರು ದಿನಗಳಿಂದ ಅಳುಗಾಡುತ್ತಿಲ್ಲ ಎಂದರೆ ಏನಾಗಿದೆ ಎಂದು ನೋಡಬೇಕು, ಸೇವಾಲಾಲರ ಕುರಿತು ನೀವು ಕಾಳಜಿ ಮಾಡಬೇಕು ಅದಕ್ಕೆ ವಿಚಾರಿಸಿ ಎಂದು ತನ್ನ ಮಾತಿನ ಮೂಲಕ ಮೋಡಿ ಮಾಡುತ್ತಾಳೆ. ಜನರು ತಪಸ್ಸಿನ ಸಿದ್ದಿ ಮುಗಿಯುವ ಮೊದಲು ಸತ್ಯ ಸೇವಾಲಲರ ತಪಸ್ಸಿಗೆ ತೊಂದರೆಯನ್ನು ನೀಡುತ್ತಾರೆ. ಆಗ ಸತ್ಯ ಸೇವಾಲಾಲರಿಗೆ ಪರಮತ್ಮನಿಂದ ಮರಳಿ ಬಂದು ದೇಹವನ್ನು ಸೇರದಂತಾಗುತ್ತದೆ. ಅದಕ್ಕಾಗಿ ಸೇವಾಲಾಲರಿಗೆ ಹುಟ್ಟು ಇದೆ, ಆದರೆ ಸಾವು ಇಲ್ಲ. ಬದುಕಿದರೆ ನಮ್ಮ ಬದುಕನ್ನು ನೋಡಿ ದೇವರು ಸಹ ಹೊಟ್ಟೆಕಿಚ್ಚು ಪಡಬೇಕು ಹಾಗೆ ಬದುಕಿ, ಬೆಳೆಯಬೇಕು ಎಂದು ಸಾಧಿಸಿ ತೋರಿಸಿದವರೇ ಸೇವಾಲಾಲರು. ಹೀಗಾಗಿ ಇವರು ಸರ್ವಕಾಲಕ್ಕೂ ಶ್ರೇಷ್ಠರಾಗಿ ಉಳಿದರು.
ಅವರ ವಾಣಿಗಳಲ್ಲಿ ಪ್ರಮುಖವು ಎಂದರೆ, 1) ‘ಸೇನ ಸಾಯಿ ವೇಸ್, ಜೀವ ಜನಗಾನಿನ ಸಾಯಿವೇಸ್, ಖೂಂಟಾ ಮುಂಗ್ರಿನ್ ಸಾಯಿ ವೇಸ್, ಕೊರೆ - ಗೋರೂನ ಸಾಯಿವೇಸ್, ಕೀಡಾ ಮಕೋಡಾನ ಸಾಯಿವೇಸ್’ ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ, ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆದಾಗಲಿ. ಜೀವವಿಲ್ಲದ ನಿರ್ಜಿವಿಗಳಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದು.
2) ‘ಧನ್ ಧಾನೇತಿ ಧಪಾಡೇಸ್’ ಅರ್ಥ: ಧರ್ಮದ ವ್ಯಾಖ್ಯಾನು ಮಾಡುತ್ತ ಸತ್ಯ, ಅಹಿಂಸೆ, ದಯೆ, ಕರುಣೆ, ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು, ಆದ್ದರಿಂದ ' ಪ್ರಕೃತಿಯೆ ಧರ್ಮ' ಎಂದು ಸಾರಿದರೂ.
3) ‘ಮತ್ ಲೋ ಜೀವ್, ಕಾಡೋ ಮತ್ ಕೋಯಿ ಲೋಯಿ’. ಅರ್ಥ: ಯಾವುದೇ ಜೀವಿಯನ್ನು ಕೋಲ್ಲಬೇಡ, ಅದರ ರಕ್ತವನ್ನು ತೆಗೆಯಬೇಡ. (ಅಹಿಂಸೆಯನ್ನು ಪ್ರತಿಪಾದಿಸಿದರೂ)
4). ‘ಕಾಮಾ ಕ್ರೋಧೇರಿ ಧೂಣಿ ಬಾಳೋ, ಸತ್ಯ ಧರ್ಮೆನ ಆಂಗ ಚಲಾಯೋ, ಭೂಕ ಜೇನ ಅನ್ನ ಖರಾಯೋ, ತರಸ ಜೇನ ಪಾಣಿ ಪರಾಯೋ’. ಅರ್ಥ: ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ. ಸತ್ಯ ಧರ್ಮವನ್ನು ಮುನ್ನೆಡೆಸಿ. ಹಸಿದವರಿಗೆ ಅನ್ನ ನೀಡಿ. ಬಾಯಾರಿದವರಿಗೆ ಜಲ ಪ್ರಾಪ್ತಿಮಾಡಿ
5) ‘ಜೋರ್ ಜುಲೂಮ್, ಗೋರ್ ಗರೀಬ ದಾಂಡನ್ ಖಾಯೇ, ವೋರಿ ಸಾತ್ ಪೀಡೀ ಪರ್ ದಾಗ್ ಲಗ ಜಾಯೆ, ವಂಶ ಪರ್ ದೀವೋ ಕೋನಿ ರೀಯೇ’. ಅರ್ಥ: ಅಮಾಯಕರಿಗೆ, ಬಡವರಿಗೆ ಎಂದು ದಂಡ ಹಾಕಬೇಡಿ. ಹಾಗೆ ಮಾಡಿದವರ ದೀಪ ಇರುವುದಿಲ್ಲ
6) ‘ರಪಿಯಾ ಕಟೋರೋ ಪಾಣಿ ವಕಿಯ. ರಪಿಯಾ ತೇರ ಚಣಾ ವಕಿಯ’. ಅರ್ಥ: ಭವಿಷ್ಯದಲ್ಲಿ ರೂಪಾಯಿಗೆ ಒಂದು ಬಟ್ಟಲು ನೀರು ಮಾರಾಟವಾಗುತ್ತದೆ. ರೂಪಾಯಿಗೆ ಹದಿಮೂರು ಕಡಲೆ ಮಾರಾಟವಾಗುತ್ತದೆ
7)’ ಜಾಣಜೋ, ಛಾಣಾಜೋ, ಮಾನಜೋ’. ಅರ್ಥ: ಆಲಿಸು, ಆಲಿಸದಿದ್ದಲ್ಲಿ ಒಳಿತು ಕೆಡಕನ್ನು ಸಾಣಿಸು, ಒಳ್ಳೆಯದನ್ನು ಸ್ವಿಕರಿಸು ಎಂಬ ತ್ರಿಸೂತ್ರ
ಹೀಗೆ ಹಲವಾರು ನುಡಿಗಳನ್ನು ಸಾರಿದ್ದಾರೆ. ಇವರ ತತ್ವಾದರ್ಶ ಇಂದಿಗೂ ಪ್ರತಿ ಸಮಾಜಕ್ಕೆ ದಾರಿದೀಪ. ಬಂಜಾರ ಸಮಾಜದ ಜನರು ಸಂಘಟಿತರಾಗುವ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. 7 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬಂಜಾರ ಸಮಾಜದ ಜನರು ಗುಣಮಟ್ಟದ ಶಿಕ್ಷಣವನ್ನು ಜನ್ಮಿಸುವ ಪ್ರತಿ ಮಗುವು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ತತ್ವಗಳನ್ನು ಲೋಕಕ್ಕೆ ಸಾರಿದ ಮಹಾರಾಜರ 281( ಜಯಂತಿ) ಆಚರಣೆಯನ್ನು ದೇಶದಲ್ಲೆಡೆ ಆಚರಿಸುತ್ತಿದ್ದೇವೆ. ಆದರೆ ಎಲ್ಲಿಯವರೆಗೂ ನಾವು ಇವರ ತತ್ವಗಳನ್ನು ನಮ್ಮ ತನು ಮನದಲ್ಲಿ ಆಳವಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗ ಇಂತಹ ದೈವಪುರುಷರ ಜಯಂತಿಗಳಿಗೆ ನಿಜವಾದ ಅರ್ಥ ಬರುವುದಿಲ್ಲ. ಅದಕ್ಕೆ ಅವರ ಆದರ್ಶ, ತತ್ವಗಳನ್ನು ತಪ್ಪದೇ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ.
ಬಂಜಾರ ಜಾಂಗದ ದಾರ್ಶನಿಕ ಪುರುಷ ಸತ್ಯ ಸೇವಾಲಾಲರ ಕುರಿತು ಈ ಮೇಲೆ ಒಂದಿಷ್ಟು ಮಾಹಿತಿಯನ್ನು ನಾನು ಓದಿದ ಕೆಲ ಪುಸ್ತಕಗಳಿಂದ, ತಿಳಿಸಿದ ಹಿರಿಯರಿಂದ ಹಾಗೂ ನನ್ನ ತಾಯಿಯವರು ಹೇಳಿದ ಮಾಹಿತಿಯಿಂದ ಇಲ್ಲಿ ಬರೆದಿರುತ್ತೇನೆ. ಅವರ ಜೀವನ ಚರೀತ್ರೆ, ತತ್ವಾದರ್ಶ, ಸತ್ಯದ ನುಡಿಗಳ ಕುರಿತು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಹಂಚಿಕೊಳ್ಳಿ. ಸಧ್ಯವಾದರೆ ಈ ಲೇಖನವನ್ನು ಓದಿಕೊಂಡು ತಮಗೆ ತಿಳಿದಿರುವ ಹೆಚ್ಚಿನ ವಿಷಯವನ್ನು ಇದಕ್ಕೆ ಸೇರಿಸಿಕೊಂಡು ಸೇವಲಾಲರ ಕುರಿತು ಅಲ್ಲಲ್ಲಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಿ, ತಿಳುವಳಿಕೆ ನೀಡಿ.
ಸೇವಾಲಾಲರನ್ನು ಕೇವಲ ಒಂದುಜನಾಂಗಕ್ಕೆ ಸೇರಿಸದೇ ಅವರು ಸಮಾಜದ ಸೇವೆಗೆ ಬಂದ ದೈವಪುರುಷ ಅವರ ನುಡಿಗಳನ್ನು ನಾವು ನೀವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಭೂಮಿಯನ್ನು ತಾಯಿಯೆಂದು, ನಿಸರ್ಗವನ್ನು ದೇವರೆಂದು ಆರಾಧಿಸೋಣ. ಪರಿಸರ, ಹಸಿರು, ನೆಲ, ಜಲವನ್ನು ಸಂರಕ್ಷಣೆ ಮಾಡೋಣ. ಎಲ್ಲರಿಗೂ  ಸತ್ಯವನ್ನೇ ನುಡಿದು, ಸಮಾಜ ಸೇವೆ ಮಾಡಿದ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಶಯಗಳು.
-
ಚಂದ್ರು ಎಂ. ರಾಥೋಡ್, ಪ್ರಜಾವಾಣಿ ವರದಿಗಾರರು, ನರೇಗಲ್, ಗದಗ ಜಿಲ್ಲೆ

ಮೊಬೈಲ್: 7676296140
ಇಮೇಲ್: mydream4uall@gmail.
Post a Comment

Post a Comment