ಶನಿವಾರ ಸಂಜೆ, ಗದಗ ಜಿಲ್ಲೆಯ ರಾಜೂರಿಗೆ ನಾನೂ ಬಾನೂ ಹೋಗುತ್ತಿದ್ದೇವೆ. ಪ್ರಿಯ ವಿದ್ಯಾರ್ಥಿಯಾಗಿದ್ದ, ಜೈಲು ಅಧೀಕ್ಷಕರಾಗಿರುವ ಡಾ. ಐ.ಜೆ. ಮ್ಯಾಗೇರಿಯವರ ಮತ್ತು ಅವರ ಶಿಷ್ಯರಾಗಿರುವ ಟಿ.ಎಸ್.ಗೊರವರ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಲು. ಅಲ್ಲಿಗೆ ಗುರುಶಿಷ್ಯರ ಮೂರು ತಲೆಮಾರು ಸೇರಿದಂತಾಗುತ್ತದೆ. ಈ ಭಾಗದ ಸಾಹಿತ್ಯದ ಓದುಗರು ನನ್ನ ಮಿತ್ರರು ಬಂದರೆ, ಸಾಹಿತ್ಯಸಂಜೆ ಕಳೆಯಬಹುದು.
ನಾನು ರಾಜೂರು ಗಜೇಂದ್ರಗಡ ರೋಣ ಶಾಂತಗಿರಿ ಮೊದಲಾದ ಊರುಗಳಲ್ಲಿ ಮೊಹರಂ ಅಧ್ಯಯನಕ್ಕಾಗಿ ಹೋಗಿದ್ದೇನೆ. ಗೊರವರ ಅವರ ಗುಡಿಸಲಿನಲ್ಲಿ ವಸ್ತಿ ಮಾಡಿದ್ದೇನೆ. ಕೆ.ಎ.ಎಸ್ ಅಧಿಕಾರಿಯಾಗಿರುವ ಡಾ. ಮ್ಯಾಗೇರಿಯವರು ಹುಟ್ಟಿ ಬೆಳೆದ ಮನೆ ಕೂಡ ಬಹಳ ಭಿನ್ನವಿಲ್ಲ. ಶರಣರು ಹೇಳುವಂತೆ 'ಮನೆನೋಡಾ ಬಡವರು; ಮನ ನೋಡಾ ಸಂಪನ್ನರು' ಎಂಬ ಚಿತ್ರಗಳು.
ಬೆಂಗಳೂರಿನ ದೊಡ್ಡ ದೊಡ್ಡ ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುವ ಪುಸ್ತಕ ಬಿಡುಗಡೆಗಳಿಗೆ ಹೋಗಿರುವೆ. ಆದರೆ ರಾಜೂರಿನ ನಾಳೆಯ ಕಾರ್ಯಕ್ರಮದ ಪರಿಯೇ ಬೇರೆಯಿದೆ. ಇಬ್ಬರು ಯುವ ಲೇಖಕರು ತಾವು ಬರೆದ ಪುಸ್ತಕಗಳನ್ನು ತಮ್ಮ ಹೆತ್ತವರ ಮುಂದೆ, ತಮ್ಮನ್ನು ಬೆಳೆಸಿದ ಊರಿನವರ ಸಮಕ್ಷಮದಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಇಬ್ಬರೂ ತಮ್ಮತಮ್ಮ ಕ್ಷೇತ್ರದಲ್ಲಿ ಶೂನ್ಯದಿಂದ ಮೇಲೆದ್ದು ಬಂದ ಮಣ್ಣಪುತ್ಥಳಿಗಳು. ಗೊರವರ ಅವರ ಪತ್ರಿಕೆ ಪ್ರಕಾಶನ ಈ ಪುಟ್ಟ ಊರಿನಿಂದ ನಡೆಯುತ್ತಿದೆ.
ಹ್ಞಾಂ. ಈ ಹುಡುಗರನ್ನೆಲ್ಲ ಹೀಗೆ ಕೆಡಿಸಿ ಬೆಳೆಸಿದ ರೂಪಿಸಿದ ಒಬ್ಬ ಧೀಮಂತ ವ್ಯಕ್ತಿ ಪರದೆಯ ಹಿಂದೆ ಇದ್ದಾರೆ. ಅವರೇ ನನ್ನ ಪ್ರಿಯ ಮಿತ್ರರಾದ ಅಪಾರ ಓದಿನ, ಚಳುವಳಿಗಳ ಸಖನಾದ ಕೆಂಚರೆಡ್ಡಿ ಗುರುಗಳು. ತಮ್ಮ ಇರುವಿಕೆಯಿಂದ ಗಜೇಂದ್ರಗಡವನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಮಾಡಿದವರು. ಇಂತಹವರಿಗೆ ಛುಪಾರುಸ್ತುಂ ( ಯಾರೂ ಅರಿಯದ ವೀರ) ಎನ್ನುವರು. ಇವರನ್ನೆಲ್ಲ ಕಾಣುವ ತವಕವಿದೆ.
Post a Comment