ಗದಗ : (Dec_02_2023)
ಬೈಕ್ನಲ್ಲಿ ಹೊರಟಿದ್ದ ಇಬ್ಬರನ್ನು ತಡೆದು ದರೋಡೆ ಮಾಡಲು ಯತ್ನಸಿದ ಇಬ್ಬರನ್ನು ಬೆಟಗೇರಿ ಬಡಾವಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ವಿಜಯನಗರ (ಹೊಸಪೇಟೆ) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಾಡರಹಳ್ಳಿ ಗ್ರಾಮದ ಸಂಜೀವ ಸುಂಕಪ್ಪ ಹಾಗೂ ರಾಜಪ್ಪ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ.
ಇಲ್ಲಿನ ಸಂಭಾಪೂರ ರಸ್ತೆಯ ಸಿದ್ಧಾರ್ಥ ಕಾಲೋನಿ ಬಳಿ ಈ ಘಟನೆ ನಡೆದಿದೆ. ನರಗುಂದದ ನಿವಾಸಿ ನಜೀರ್ ಅಹ್ಮದ್ ಅತ್ತಾರ ಹಾಗೂ ಬೆಟಗೇರಿಯ ರಹಮತ್ ಎನ್ನುವರು ಸಂಭಾಪೂರ ಕಡೆಗೆ ಹೊರಟಾಗ ಏಕಾಏಕಿ ಬೈಕ್ ತಡೆದು ಇಬ್ಬರು ರಾಡ್, ಚಾಕು ತೋರಿಸಿ ಹಣ, ಬಂಗಾರ ಹಾಗೂ ಮೊಬೈಲ್ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ಇಲ್ಲಿಯೇ ಮುಗಿಸಿಬಿಡ್ತೀವಿ ಎಂದು ನಜೀರ್ ಅಹ್ಮದ್ ಹಾಗೂ ರಹಮತ್ ಬಳಿ ಇದ್ದ ಮೊಬೈಲ್ ಹಾಗೂ ಹಣ ದೋಚಿ, ಪರಾರಿಯಾಗಲು ಯತ್ನಿಸಿದ್ದಾರೆ.
ತಕ್ಷಣವೇ ನಜೀರ್ ಅಹ್ಮದ್ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ, ಎಸ್ಪಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಬೆಟಗೇರಿ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎ. ಗುಡ್ಡಿಮಠ, ಮಂಜುನಾಥ್ ಗಾಣಿಗೇರ ಹಾಗೂ ಚನ್ನಬಸಪ್ಪ ಮಾದರ ಸಿನಿಮೀಯ ರೀತಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಬಂಧಿತರ ಮೇಲೆ ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಎಂದು ನಂಬಿಸಿ ಮೋಸ ಮಾಡಿದ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಕೇಸ್ಗಳಿವೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ.
ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Post a Comment