ಭೋಪಾಲ್ : (Dec_02_2023)
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 'ಗೆಲುವು ಖಚಿತ' ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿವೆ.
'ತಮ್ಮ ಪಕ್ಷ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಲಿದೆ' ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ ಎಣಿಕೆ ಮುನ್ನಾದಿನವಾದ ಶನಿವಾರ ಹೇಳಿದರು.
'ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸ ಹಾಗೂ ಮಧ್ಯಪ್ರದೇಶದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳಿಂದ ಇದು ಸಾಧ್ಯವಾಗಲಿದೆ. ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳು ಬಿಜೆಪಿಗೆ ಲಭಿಸಲಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಮುನಾ ಜಿಲ್ಲೆಯ ಶನೀಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪಕ್ಷದ ಗೆಲುವಿಗಾಗಿ ಪ್ರಾರ್ಥಿಸಿದರು.
ಶನಿವಾರ 63ನೇ ಹುಟ್ಟುಹಬ್ಬ ಆಚರಿಸಿದ ನಡ್ಡಾ ಅವರು ಗ್ವಾಲಿಯರ್‌ನಿಂದ 40 ಕಿ.ಮೀ. ದೂರದಲ್ಲಿರುವ ದೇವಾಲಯಕ್ಕೆ ತೆರಳುವಾಗ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿಯ ಇತರ ಮುಖಂಡರು ಸಾಥ್ ನೀಡಿದರು.
ಮಧ್ಯಪ್ರದೇಶದ 230 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಭಾನುವಾರ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. 52 ಜಿಲ್ಲಾ ಕೇಂದ್ರಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.
Post a Comment