ಬೆಳಗಾವಿ : (Dec_11_2023)
ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಹಿಳೆಯನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿದ್ದ ಸ್ಥಳ ಪರಿಶೀಲಿಸಿದರು. ಈ ವೇಳೆ ಸಚಿವರ ಕಾಲಿಗೆ ಬಿದ್ದ ಯುವಕನ ಅಜ್ಜಿ 'ನಮಗೇನೂ ಗೊತ್ತಿಲ್ಲ, ನಮ್ಮನ್ನು ಕಾಪಾಡಿ' ಎಂದು ಕಾಲಿಗೆ ಬಿದ್ದು, ಬೇಡಿಕೊಂಡರು.
ಗ್ರಾಮದ ಯುವಕ ದುಂಡಪ್ಪ (ಅಶೋಕ) ಹಾಗೂ ಪ್ರಿಯಾಂಕಾ ಪ್ರೀತಿಸಿ, ಭಾನುವಾರ ರಾತ್ರಿ ಓಡಿ ಹೋಗಿದ್ದಾರೆ. ಸಿಟ್ಟಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಈ ಹಿನ್ನೆಲೆಯಲ್ಲಿ ಊರಿಗೆ ಬಂದ ಡಾ.ಪರಮೇಶ್ವರ್, ಮಹಿಳೆಯ ಮನೆಗೆ ಆದ ಹಾಗೂ ಹಲ್ಲೆ ಮಾಡಿದ ಸ್ಥಳಗಳನ್ನು ಪರಿಶೀಲನೆ ನಡೆಸಿದರು. ಬಳಿಕ
ಮನೆಯ ಮುಂದೆ ಕಣ್ಣೀರು ಹಾಕುತ್ತ ಕುಳಿತಿದ್ದ ಯುವಕನ ಅಜ್ಜಿಗೆ ಸಮಾಧಾನ ಹೇಳಿದರು.
ಸಚಿವರ ಮುಂದೆ ಗೋಳು ತೋಡಿಕೊಂಡ ಅಜ್ಜಿ, “ನಮಗೆ ಈ ವಿಷಯ ಏನೂ ಗೊತ್ತಿಲ್ಲಪ್ಪ. ಮೊಮ್ಮಗ ನಿನ್ನೆ ಮನೆಯಲ್ಲೇ ಮಲಗಿದ್ದ. ಯಾವಾಗ ಆ ಹುಡುಗಿ ಕರೆದಳೋ ಯಾವಾಗ ಹೋದನೋ ಗೊತ್ತಿಲ್ಲ. ಆಕೆಯ ಮನೆಯವರು ಬಂದು ಏಕಾಏಕಿ ಹೊಡೆಯಲು ಶುರು ಮಾಡಿದರು. ನಮಗೆ ಜೀವ ಭಯ ಉಂಟಾಗಿದೆ. ನಮ್ಮನ್ನು ಕಾಪಾಡಿ ತಂದೆ' ಎನ್ನುತ್ತ ಅಜ್ಜಿ ಪರಮೇಶ್ವರ ಅವರ ಕಾಲಿಗೆ ಬಿದ್ದು ಅಂಗಲಾಚಿದರು.
Post a Comment