-->
Bookmark

Naregal : ಪ್ರಕೃತಿ ಮಾತೆ ನಿಜವಾದ ಅನ್ನದಾತೆ, ಗಿಡಮರ ಬೆಳಸಿ ಜೀವ ಸಂಕುಲ ಉಳಿಸಿ

Naregal : ಪ್ರಕೃತಿ ಮಾತೆ ನಿಜವಾದ ಅನ್ನದಾತೆ, ಗಿಡಮರ ಬೆಳಸಿ ಜೀವ ಸಂಕುಲ ಉಳಿಸಿ
ನರೇಗಲ್: (Nov_26_2023)
ಪ್ರತಿ ಜೀವ ಸಂಕುಲಕ್ಕೆ ಉಸಿರಾಡಲು ಗಾಳಿ, ಕುಡಿಯಲು ನೀರು, ತಿನ್ನಲು ಆಹಾರ ಮತ್ತು ಬದುಕಲು ಆಶ್ರಯ ಕೊಟ್ಟಿರುವ ಪ್ರಕೃತಿ ಮಾತೆಯೇ ನಿಜವಾದ ಅನ್ನದಾತೆಯಾಗಿದ್ದಾಳೆ ಎಂದು ಪಟ್ಟಣದ ವೈದ್ಯ ಡಾ. ನಾಗರಾಜ್ ಎಲ್. ಗ್ರಾಮಪುರೋಹಿತ್ ಹೇಳಿದರು.

 ನರೇಗಲ್ ಪಟ್ಟಣದ ಎಸ್. ಆರ್. ಕೆ ಫಿಟ್ನೆಸ್ ಸಂಸ್ಥೆಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 ಗಿಡಮರಗಳು ಸೇರಿದಂತೆ ಭೂಮಿಯ ಮೇಲೆ ಬದುಕುವ ಹಕ್ಕನ್ನು ಪ್ರತಿಯೊಂದು ಜೀವಿಯೂ ಹೊಂದಿದೆ. ಯಾವುದೇ ಕಾರಣಕ್ಕೆ ಗಿಡಗಳನ್ನು ಕಡಿಯುವ, ಪ್ರಾಣಿಗಳನ್ನು ಕೊಲ್ಲುವ ಹಕ್ಕನ್ನು ಯಾರಿಗೂ ಇರುವುದಿಲ್ಲ. ಎಲ್ಲಿ ಜೀವ ಸಂಕುಲದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಲ್ಲಿ ತೊಂದರೆಗಳ ಪ್ರಮಾಣವು ಜಾಸ್ತಿಯಾಗುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಲನದಿಂದ ಮಾತ್ರ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಕೂಡ ಸಾಧ್ಯವಾಗುತ್ತದೆ. ಪರಿಸರ ಮಾಲಿನ್ಯ, ಕಣ್ಮರೆಯಾಗುತ್ತಿರುವ ಅರಣ್ಯ, ವನ್ಯಜೀವಿಗಳು, ಕ್ಷೀಣಿಸುತ್ತಿರುವ ನಿಸರ್ಗ ಸಂಪನ್ಮೂಲಗಳು, ಬಡವಾಗುತ್ತಿವೆ. ಅವುಗಳ ರಕ್ಷಣೆಗೆ ಮುಂದಾಗಿ ಎಂದು ಕರೆಕೊಟ್ಟರು. 

ಈ ವೇಳೆ ಮಾತನಾಡಿದ ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಮು. ಜರತಾರಿ, ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು. ಗ್ರಾಮೀಣ ಪ್ರದೇಶದ ಜಲಮೂಲಗಳಾದ ಮಣ್ಣು, ನೀರು, ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

 
ದೈಹಿಕ ಶಿಕ್ಷಣದ ನಿರ್ದೇಶಕ ಆರ್. ಎಸ್. ನರೇಗಲ್ ಮಾತನಾಡಿ, ಆರೋಗ್ಯಪೂರ್ಣ ಬದುಕಿಗೆ ಒಳ್ಳೆಯ ಪರಿಸರವೇ ಆಧಾರವಾಗಿದ್ದು, ನಮಗೆ ಮತ್ತು ಪ್ರಾಣಿಪಕ್ಷಿಗಳಿಗೆ ಗಾಳಿ , ನೀರು, ನೆರಳು, ಹಣ್ಣು- ಹಂಪಲು ನೀಡುವ ವೃಕ್ಷಗಳನ್ನು ಬೆಳೆಸಿ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು ಎಂದರು.

ಈ ವೇಳೆ ಮಹೇಶ ಧಡೆಸೂರಮಠ, ಮಹಮ್ಮದ್ ನಶೇಖನ್,  ವಿನಾಯಕ ಹೂಗಾರ, ರೈಮಾನ ಮಾರನಬಸರಿ, ರವಿ ಪೂಜಾರ, ಸಿದ್ದು ವಕೀಲರು, ಚನ್ನವೀರ ಕೋಟುಮಚಗಿ, ಗೋಪಿ ಕೆ.ಎಸ್.ಆರ್.ಟಿ.ಸಿ, ಸಂತೋಷ ಭೂಮನಗೌಡ್ರ, ಗಂಗಾಧರ ಮಡಿವಾಳರ, ಯೂಸುಫ್ ರಾಹುತ್, ಫಯಾಜ್ ನದಾಫ್, ರೈಮಾನ ಹೊಸಮನಿ, ರಾಘು ಕೊನ್ನುರಕರ, ಪ್ರಕಾಶ ರಾಠೋಡ, ಸದ್ದಾಂ ನಶೇಖಾನ್ ಇದ್ದರು.
Post a Comment

Post a Comment