-->
Bookmark

Gadag : ಜನತಾ ದರ್ಶನ ಕಾರ್ಯಕ್ರಮ _ ಸಚಿವ ಹೆಚ್.ಕೆ.ಪಾಟೀಲ್ ಚಲನೆ

Gadag : ಜನತಾ ದರ್ಶನ ಕಾರ್ಯಕ್ರಮ _ ಸಚಿವ ಹೆಚ್.ಕೆ.ಪಾಟೀಲ್ ಚಾಲನೆ

ಜನಸಾಮಾನ್ಯರ  ಅಹವಾಲುಗಳಿಗೆ ಸ್ಪಂದಿಸುವ ಕಾರ್ಯ ಜನತಾ ದರ್ಶನದಿಂದಾಗಲಿ
ಗದಗ : (Sept 29_09_2023)
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ಜಿಡ್ಡುಗಟ್ಟಿದ ಆಡಳಿತವನ್ನು ಸರಿದಾರಿಗೆ ತರುವ ಕಾರ್ಯ ಮಾಡುವ ಉದ್ದೇಶದೊಂದಿಗೆ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಹೆಚ್.ಕೆ.ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಪ್ರಥಮ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. 
ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಅಹವಾಲುಗಳನ್ನು ಸಲ್ಲಿಸುತ್ತಿದ್ದರು. ರಾಜ್ಯದ ವಿವಿಧೆಡೆಯಿಂದ ಅಗಮಿಸುವ ಜನಸಾಮಾನ್ಯರು ಬೆಂಗಳೂರಿಗೆ ಬರುತ್ತಿರುವುದನ್ನು ತಪ್ಪಿಸಿ ಜಿಲ್ಲಾ ಹಂತದಲ್ಲೇ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಜನತಾ ದರ್ಶನವನ್ನು ಆಯೋಜಿಸಲಾಗಿದೆ.
ಜನಸಾಮಾನ್ಯರ ಸಣ್ಣಪುಟ್ಟ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಅವಕಾಶವಿದ್ದು,‌ ಆಡಳಿತ ವರ್ಗ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕು. ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಜಡತ್ವದಿಂದ ಹೊರಬಂದು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಜನತಾ ದರ್ಶನದಲ್ಲಿ ಸ್ವೀಕರಿಸುವ ಅಹವಾಲುಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು ಎಂದರು.
ಜನಸಾಮಾನ್ಯರು ಯಾವುದೇ ಹಂಗು ಭಿಡೆಯಿಲ್ಲದೇ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಸಮಸ್ಯೆಗಳು ಕಾನೂನಾತ್ಮಕ ಚೌಕಟ್ಟಿನಲ್ಲಿ ಇದ್ದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲು ಅಧಿಕಾರಿ ವರ್ಗ ಮುಂದಾಗಬೇಕು. ಪಾರದರ್ಶಕವಾಗಿ ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಹಾಗೂ ನಿರ್ಣಯ ಈ ಜನತಾ ದರ್ಶನದ ಮೂಲಕ ಆಗಬೇಕು ಎಂದರು.

ಮೂರು ಹಂತಗಳಲ್ಲಿ ಸಾರ್ವಜನಿಕರ ಅಹವಾಲುಗಳು ಸ್ವಿಕೃತವಾಗುತ್ತವೆ. ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಹಂತದಲ್ಲಿ ನಿರ್ಣಯ ತೆಗೆದುಕೊಳ್ಳುವ ಅಹವಾಲುಗಳು ಒಂದನೇ ಹಂತದ್ದಾದರೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳುವ ಅಹವಾಲುಗಳು ಎರಡನೇ ಹಂತದ್ದಾಗಿರುತ್ತದೆ. ಇನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತದಲ್ಲಿ ಅಹವಾಲುಗಳಿಗೆ ಪರಿಹಾರ ನೀಡುವ ಕಾರ್ಯ ಮೂರನೇ ಹಂತದಲ್ಲಿ ಇರಲಿದ್ದು, ಈ ಎಲ್ಲ ಹಂತಗಳಲ್ಲಿಯೂ ಸಹ ನಿಗದಿತ ಅವಧಿಯೊಳಗೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಿದೆ ಎಂದರು.

ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಾಗಬೇಕು. ಇದು ಸರ್ಕಾರದ ನಿರ್ಧಾರ. ಆಡಳಿತದಲ್ಲಿ ಶೋಷಣೆಮುಕ್ತ ಕಾರ್ಯ ಜಾರಿಯಾಗಬೇಕು. ಬ್ರಿಟಿಷ್ ಆಡಳಿತ ಹೋಗಿದ್ದು, ಆ ಮನಸ್ಥಿತಿಯಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೊರಬರಬೇಕು. ಜನರ ಸಮಸ್ಯೆಗಳಿಗೆ ಸಹಾನುಭೂತಿಯಿಂದ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು. 

ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅಹವಾಲುಗಳ  ಹಾಗೂ ಪರಿಹಾರ ನೀಡಿದ ಅಹವಾಲುಗಳ ಸಂಖ್ಯೆಯ ಕುರಿತು ಮಾಸಾಂತ್ಯದ ವೇಳೆಗೆ ಪುಸ್ತಕ ರೂಪದಲ್ಲಿ ಅಂಕಿ ಅಂಶಗಳನ್ನು ನೀಡಲಾಗುವುದು. ಅಲ್ಲದೇ ಸರ್ಕಾರದ ಜನತಾ ದರ್ಶನ ಪೋರ್ಟಲ್‍ನಲ್ಲಿಯೂ ಮಾಹಿತಿ ಪ್ರಕಟಿಸಲಾಗುವುದು. ಪಾರದರ್ಶಕ ಆಡಳಿತ ನೀಡುವಲ್ಲಿ ಸರ್ಕಾರ ಬದ್ಧವಾಗಿದೆ. ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಜನತಾ ದರ್ಶನ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು. 
 
ಸರ್ಕಾರದ ಮಹಾತ್ವಾಕಾಂಕ್ಷಿ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಈ ನಾಲ್ಕೂ ಗ್ಯಾರಂಟಿಗಳನ್ನು ಪ್ರಥಮಾದ್ಯತೆ ಮೇರೆಗೆ ಅನುಷ್ಟಾನಗೊಳಿಸುವ ಮೂಲಕ ಪ್ರತಿ ಗ್ಯಾರಂಟಿ ಯೋಜನೆಯಲ್ಲೂ ಸಹ ಶೇ.92 ರಿಂದ 95 ರಷ್ಟು ಗುರಿ ಸಾಧನೆ ಮಾಡಿದೆ. ಈ ಗುರಿ ಸಾಧನೆಯಲ್ಲಿ ಆಡಳಿತ ವರ್ಗದ ಪಾತ್ರ ಪ್ರಮುಖವಾಗಿದೆ ಎಂದರು.
ಶತಾಯುಷಿಗೆ ಮಂಜೂರಾತಿ ಆದೇಶ :  
ಕಾರ್ಯಕ್ರಮದ ಉದ್ಘಾಟನೆ ನಂತರ ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ ಶತಾಯುಷಿ ಕಮಲಾಬಾಯಿ ಜೋಶಿಯವರು ಪ್ರಥಮ ಅಹವಾಲನ್ನು ಸಚಿವರಿಗೆ ಸಲ್ಲಿಸಿ ತಮಗೆ ಆಧಾರ ಕಾರ್ಡ ಹಾಗೂ ಮಾಸಾಶನ ಮಂಜೂರಾತಿ ಮಾಡುವಂತೆ ಕೋರಿದರು. ಸಚಿವರು ಉದ್ಘಾಟನೆ ಕಾರ್ಯಕ್ರಮದ ಕೊನೆಯಲ್ಲಿ ಶತಾಯುಷಿ ಕಮಲಾಬಾಯಿ ಜೋಶಿಯವರಿಗೆ ಮಂಜೂರಾತಿ ಆದೇಶ ನೀಡುವ ಮೂಲಕ ನೆರೆದ ಜನಸ್ತೋಮದ ಮೆಚ್ಚುಗೆಗೆ ಪಾತ್ರರಾದರು. 
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸರ್ಕಾರದ ವಿನೂತನ ಕಾರ್ಯಕ್ರಮ. ಸಚಿವರು ಇಂದು ಅಹವಾಲು ಹಿಡಿದು ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ಸಾರ್ವಜನಿಕರು ಸಮಾಧಾನದಿಂದ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು ಎಂದರು. 

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಅಹವಾಲು ಸಲ್ಲಿಸಲು ಆಗಮಿಸಿದ ಸಾರ್ವಜನಿಕರು, ಗಣ್ಯರು ಹಾಜರಿದ್ದರು.  

ನಾಡಗೀತೆಯನ್ನು ಡಾ. ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರು  ಪ್ರಸ್ತುತಪಡಿಸಿದರು. ಉಪನ್ಯಾಸಕರಾದ ದತ್ತ ಪ್ರಸನ್ನ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.  
Post a Comment

Post a Comment