-->
Bookmark

ಕೃಷಿ ಕಾಯಕವೂ ದೇಶ ಸೇವೆಗೆ ಸಮಾನ : ಡಾ. ನಾನು ಪಾಟೀಲ

ಕೃಷಿ ಕಾಯಕವೂ ದೇಶ ಸೇವೆಗೆ ಸಮಾನ : ಡಾ. ನಾನು ಪಾಟೀಲ

ಗುರಿ ಸಾಧಿಸುವ ಛಲ, ಧೈರ್ಯ ಇದ್ದರೆ ಯಶಸ್ಸು

ಬದುಕಿದ್ದಾಗ ರಕ್ತದಾನ ; ಅಗಲಿದಾಗ ನೇತ್ರದಾನ ಮಾಡಲು ಪ್ರೇರಣೆ

ಗಜೇಂದ್ರಗಡ : 

ಭೂತಾಯಿಯನ್ನು ನಂಬಿ ದುಡಿಯುವ ಹಾಗೂ ಹೊಲದಲ್ಲಿ ಕೃಷಿ ಸಾಧನೆ ಮಾಡುವ ಕಾಯಕವೂ ಸಹ ದೇಶ ಸೇವೆಗೆ ಸಮಾನವಾಗಿದೆ ಆದ್ದರಿಂದ ವಿದ್ಯಾವಂತ ವಿದ್ಯಾರ್ಥಿಗಳು ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ವಿಶ್ವ ದಾಖಲೆಯ ಅಂಧ ಸ್ಕೇಟಿಂಗ್‌ ಕ್ರೀಡಾಪಟು, ಅಂತರಾಷ್ಟ್ರೀಯ ವೇದಿಕೆಗಳ ಭಾಷಣಕಾರ ಡಾ. ನಾನು ಎಸ್. ಪಾಟೀಲ‌ ಹೇಳಿದರು.

ಪಟ್ಟಣದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಯುವರೆಡ್‌ ಕ್ರಾಸ್‌, ಸ್ಕೌಟ್‌ ಮತ್ತು ಗೈಡ್ಸ್‌ ಹಾಗೂ ಎನ್.ಎಸ್.ಎಸ್.‌ ಘಟಕಗಳ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಹಳ್ಳಿಗಳಲ್ಲಿ ಜಮೀನು ಇರುವ ಬಹುತೇಕ ವಿದ್ಯಾವಂತ ಯುವಕರು ಕೆಲಸಕ್ಕಾಗಿ ಪಟ್ಟಣದಲ್ಲಿ ಅಲೆದು ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುವುದು ನೋಡಿದರೆ ನೋವಾಗುತ್ತದೆ. ಅದೇ ವಿದ್ಯೆಯನ್ನು  ಆಧುನಿಕ ಕೃಷಿಗೆ ನೀಡಿದರೆ ರಾಜನಂತೆ ಮೆರಯಬಹುದು ಹಾಗೂ ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಕಿವಿ ಮಾತು ಹೇಳಿದರು.
        ಧೈರ್ಯ, ಗುರಿ ಮತ್ತು ಸಾಧಿಸುವ ಛಲ ಇದ್ದರೆ ಯಾವುದೇ ವ್ಯಕ್ತಿ ಸವಾಲು ಎದುರಿಸಿ  ಸಾಧನೆ ಗೈಯಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಉದಾತ್ತ ಚಿಂತನೆ ಅರಳಬೇಕು.  ಭವಿಷ್ಯದಲ್ಲಿ ಉನ್ನತ ಮಟ್ಟದ ಗುರಿ ತಲುಪುವ ನಂಬಿಕೆ ಇರಬೇಕು ಎಂದು ಹೇಳಿದರು.
       ನಮ್ಮ ದೇಶದಲ್ಲಿ ಅಂಧರಿಗಿಂತ ಸಾಯುವವರ ಸಂಖ್ಯೆ ಜಾಸ್ತಿಯಾಗಿದೆ ಅವರಲ್ಲಿ ಸಹಜವಾಗಿ ನಿಧನ ಹೊಂದಿದ ವ್ಯಕ್ತಿಗಳು ತಮ್ಮ ಕಣ್ಣುಗಳನನು ದಾನ ಮಾಡಿದರೆ ನನ್ನಂತ ಅಂಧ ಹುಡುಕಿದರು ಸಿಗುವುದಿಲ್ಲ. ಅದಕ್ಕಾಗಿ ಬದುಕಿದ್ದಾಗ ರಕ್ತದಾನ ಹಾಗೂ ಸತ್ತಾಗ ನೇತ್ರದಾನ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಪ್ರೇರೆಪಿಸಿದರು. ತಮ್ಮ ಮಾತುಗಳಲ್ಲಿ ಅನೇಕ ಉದಾಹರಣೆ ಹಾಗೂ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ, ಸಾಧನೆಗಳನ್ನು ಹೇಳುವ ಮೂಲಕ ಸ್ಪೂರ್ತಿ ತುಂಬಿದರು. 

ಪ್ರಾಂಶುಪಾಲ ಮಹೇಂದ್ರ ಜಿ ಮಾತನಾಡಿ, ಅರಮನೆ ಇರಲಿ, ಗುಡಿಸಲೇ ಇರಲಿ, ಸಿರಿತನವಿರಲಿ, ಬಡತನ ವಿರಲಿ ಓದುವ ಹಂಬಲವಿದ್ದರೆ, ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಅಂಧತ್ವವಿದ್ದರು ಈಜು, ಸ್ಕೇಟಿಂಗ್‌, ಓದು, ವಿವಿಧ ಭಾಷೆಯಲ್ಲಿ ವಾಗ್ಮಿಗಳಾಗಿ ವಿಶ್ವದಾಖಲೆ ಮಾಡಿರುವ ಡಾ. ನಾನು ಪಾಟೀಲ ಅವರು ಜೀವಂತ ಉದಾಹರಣೆಯಾಗಿದ್ದಾರೆ ಎಂದರು.
         ಸೋಲು, ಗೆಲುವು ಜೀವನದ ಭಾಗಗಳು. ಸೋತಾಗ ಕುಗ್ಗುವುದು, ಗೆದ್ದಾಗ ಹಿಗ್ಗುವವರ ಕೈಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಛಲದಿಂದ ಗುರಿ ಮುಟ್ಟಲು ಶ್ರಮಿಸಿದರೆ ಯಶಸ್ಸು ತಾನೇ ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿಗಳಲ್ಲಿ ಉದಾತ್ತ ಚಿಂತನೆ ಅರಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಈ ವೇಳೆ ಈಚೆಗೆ ಗೌರವ ಡಾಕ್ಟರೇಟ್‌ ಪಡೆದ ಪ್ರಕಾಶ ಹುಲ್ಲೂರ, ಐ. ಎನ್.‌ ಹಾಳಿ ಹಾಗೂ ಉಪನ್ಯಾಸ ನೀಡಿದ ಡಾ. ನಾನು ಪಾಟೀರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಮಂಜುಳಾ ಈಶ್ವರಪ್ಪ ರೇವಡಿ, ಎಫ್.‌ ಎಸ್.‌ ಕರಿದುರಗಣ್ಣವರ, ರಾಜು ಸಾಂಗ್ಲಿಕರ, ದಾದು ಹಣಗಿ, ಶ್ರೀಧರ ಗಂಜಿಹಾಳ, ಸರಸ್ವತಿ ಕೆ, ಮಹಾಂತೇಶ ಜೀವಣ್ಣವರ, ಹಿತೇಶ ಬಿ, ಸಿದ್ದಾರ್ಥ ಕೆ, ಜೀವಿತಾ ಎಂ ಇದ್ದರು.

Post a Comment

Post a Comment