-->
Bookmark

Hampi : ಹಂಪಿ ಸ್ಮಾರಕ ಬಳಿ, ಕ್ರೇನ್, ಬುಲ್ಡೋಜರ್ : ಸಾರ್ವಜನಿಕರು ಅಚ್ಚರಿ

ಹಂಪಿ ಸ್ಮಾರಕ ಬಳಿ, ಕ್ರೇನ್, ಬುಲ್ಡೋಜರ್ : ಸಾರ್ವಜನಿಕರು ಅಚ್ಚರಿ 

ಹೊಸಪೇಟೆ ( ವಿಜಯ ನಗರ ) : 
ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಬಳಿ ಇದೀಗ ಕ್ರೇನ್, ಬುಲ್ಡೋಜರ್‌ಗಳ ಸದ್ದು ಕೇಳಿಸುತ್ತಿದ್ದು, ಪ್ರವಾಸಿಗರು, ಪ್ರವಾಸಿ ಮಾರ್ಗದರ್ಶಕರು, ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸ್ಮಾರಕಗಳ ಬಳಿ ಯಾವುದೇ ಬೃಹತ್ ಯಂತ್ರ ಬಳಸುವಂತಿಲ್ಲ ಎಂದು ಪುರಾತತ್ವ ಇಲಾಖೆ ಕಟ್ಟಪ್ಪಣೆ ಮಾಡಿದೆ. ಸಾರ್ವಜನಿಕರು ಸಹ ಇದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಆದರೆ ಮುಂದಿನ ತಿಂಗಳು ನಡೆಯುವ ಜಿ- 20 ಸಭೆಗೆ ಸಜ್ಜಾಗುತ್ತಿರುವ ಹಂಪಿಯಲ್ಲಿ ನಡೆಯುತ್ತಿರುವ ಕೆಲವು ಅಭಿವೃದ್ಧಿ ಕೆಲಸಗಳಿಗೆ ಈ ನಿಯಮಗಳಿಂದ ವಿನಾಯಿತಿ ಸಿಕ್ಕಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
“ನಿಯಮ ಎಲ್ಲರಿಗೂ ಒಂದೇ ಎಂಬುದು ಗೊತ್ತಿದೆ. ಆದರೆ ಬೃಹತ್ ಚಪ್ಪಡಿ ಕಲ್ಲುಗಳನ್ನು ಎತ್ತಲು ಮನುಷ್ಯರಿಂದ ಸಾಧ್ಯವಿಲ್ಲ. ಹೀಗಾಗಿ ಯಂತ್ರ ಬಳಸುವುದು ಅನಿವಾರ್ಯವಾಗಿದೆ. ಇಂತಹ ಕೆಲವೊಂದು ಕೆಲಸಗಳಿಗೆ ಯಂತ್ರ ಬಳಕೆ ಬಿಟ್ಟರೆ ಉಳಿದಂತೆ ನಿಯಮಗಳ ಪಾಲನೆ ಮಾಡಲಾಗುವುದು' ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದರು ಎಂದು ಖಾಸಗಿ ದಿನ ಪತ್ರಿಕೆಯೊಂದು ವರದಿ ಮಾಡಿದೆ. 

'ಹಂಪಿಯ ಕಲ್ಲು ಕಲ್ಲುಗಳಲ್ಲೂ ಇತಿಹಾಸ ಅವಿತು ಕುಳಿತಿದೆ. ಅದೆಷ್ಟೋ ಮಾಹಿತಿಗಳು ಇನ್ನೂ ತಿಳಿದುಕೊಳ್ಳುವುದು ಬಾಕಿ ಇದೆ. ಹೀಗಾಗಿ ಸ್ಮಾರಕಗಳನ್ನು ವಿರೂಪಗೊಳಿಸುವುದು, ಕಲ್ಲುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದಕ್ಕೆ ನಿರ್ಬಂಧ ಇದೆ. ಅತ್ಯಂತ ಕಟ್ಟುನಿಟ್ಟಾಗಿ ಅದನ್ನು ಪಾಲಿಸಲಾಗುತ್ತಿದೆ. ಜಿ-20 ಸಮಾವೇಶಕ್ಕೆ ಕೆಲವೊಂದು ಸಿದ್ಧತೆಗಳನ್ನು ಮಾಡಲೇಬೇಕಿದ್ದು, ಹೀಗಾಗಿ ಸ್ಮಾರಕಗಳಿಗೆ ಹಾನಿ ಆಗದ ರೀತಿಯಲ್ಲಿ ಯಂತ್ರಗಳ ಬಳಕೆ ನಡೆಯುತ್ತಿದೆ' ಎಂದು ಅವರು ಮಾಹಿತಿ ನೀಡಿದರು.
ಈ ಮಧ್ಯೆ, ಹಂಪಿಯಲ್ಲಿ ತಾತ್ಕಾಲಿಕ ಮೊಬೈಲ್ ಟವರ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಈಗಾಗಲೇ ಒಂದು ಟವ‌ರ್ ಸಾಸಿವೆ ಕಾಳು ಗಣಪ ದೇವಾಲಯದ ಬಳಿ ಸ್ಥಾಪನೆಗೊಂಡಿದ್ದು, ನೆಟ್‌ವರ್ಕ್ ಸಿಗ್ನಲ್‌ ಲಭ್ಯತೆ ನೋಡಿಕೊಂಡು ಇನ್ನೂ ಮೂರು ಕಡೆ ಟವ‌ರ್ ಅಳವಡಿಸಲು ಸಿದ್ಧತೆ ನಡೆದಿದೆ.

ಹಂಪಿಯಲ್ಲಿ ಜಿ-20 ಸಮಾವೇಶಕ್ಕೆ ಸಿದ್ಧತೆ ಕಟ್ಟುನಿಟ್ಟಿನ ಕಾನೂನುಗಳಿಗೆ ಈಗ ಸ್ವಲ್ಪ ವಿನಾಯಿತಿ ನೀಡಿದ್ದಾರೆ. 

ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಹಾಗೂ ವಾರಾಂತ್ಯದ ಕಾರಣ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭಾನುವಾರ ಹಂಪಿಗೆ ಬಂದಿದ್ದರು. ವಿರೂಪಾಕ್ಷ ದೇವಸ್ಥಾನದ ಮುಖ್ಯ ಗೋಪುರದ ಮುಂಭಾಗದಲ್ಲೇ ಕಾಮಗಾರಿಗಳು ನಡೆಯುತ್ತಿದ್ದು ಜನರಿಗೆ ದೇವಸ್ಥಾನದ ಒಳಗೆ ತೆರಳಲು ಬದಲಿ ಮಾರ್ಗ ಕಲ್ಪಿಸದೆ ಇದ್ದ ಕಾರಣ ಅವರು ಕಷ್ಟ ಅನುಭವಿಸಿದರು. ಕೆಕೆಆರ್‌ಟಿಸಿ ಬಸ್‌ಗಳೂ ಇಲ್ಲದ ಕಾರಣ, ಇದ್ದ ಬಸ್‌ಗಳಲ್ಲಿ ಬಹಳ ದಟ್ಟಣೆ ಇತ್ತು. 'ಶಕ್ತಿ' ಯೋಜನೆಯ ಲಾಭ ಕೆಲವು ಮಹಿಳೆಯರಿಗಷ್ಟೇ ಆಗಿದ್ದು, ಬಸ್‌ ಸಂಖ್ಯೆ ಕಡಿಮೆ ಇದ್ದ ಕಾರಣ ಅಟೊದಲ್ಲಿ ಟ್ಯಾಕ್ಸಿ ಮಾಡಿಕೊಂಡು ಜನರು ಬರುತ್ತಿದ್ದುದು ಕಂಡುಬಂತು.
Post a Comment

Post a Comment