ಗದಗ : ಭಾರತರತ್ನ ಪಂ. ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆ
*ಕರ್ನಾಟಕ ರಾಜ್ಯ ನಾಮಕರಣವಾಗಿ 50 ವರ್ಷ ಹಿನ್ನೆಲೆ ಗದಗ ಜಿಲ್ಲೆಯಿಂದಲೇ ವರ್ಷಾಚರಣೆ ಕಾರ್ಯಕ್ರಮ ಆರಂಭ : ಸಚಿವ ಶಿವರಾಜ ತಂಗಡಗಿ*
ಗದಗ: ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆ ವರ್ಷದಾದ್ಯಂತ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಅಂತಹ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದಲೇ ಚಾಲನೆ ನೀಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಭಾರತರತ್ನ ಪಂ. ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವರ್ಷಾಚಾರಣೆ ಉದ್ಘಾಟನೆ ಕಾರ್ಯಕ್ರಮ ಕೂಡಾ ಪಂ.ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದಿಂದಲೇ ಚಾಲನೆ ನೀಡಲಾಗುವದು ಎಂದರು. ಗದಗ ಜಿಲ್ಲೆ ಕಲೆ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಈ ರಂಗಮಂದಿರ ನಿರ್ಮಾಣದಲ್ಲಿ ನಮ್ಮ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದ್ದು ಇಂತಹ ರಂಗಮಂದಿರಗಳನ್ನು ಪ್ರತಿ ಜಿಲ್ಲೆಗೆ ನಿರ್ಮಾಣ ಮಾಡಲು ಆಲೋಚನೆ ಮಾಡಲಾಗುವದು ಎಂದರು. ಗದಗ ಜಿಲ್ಲಾ ರಂಗಮಂದಿರ ತುಂಬ ಚೆನ್ನಾಗಿ ನಿರ್ಮಾಣಗೊಂಡಿದ್ದು ಇದರ ನಿರ್ವಹಣೆಗೆ ಇಲಾಖೆಯಿಂದ ಅಗತ್ಯದ ಸಹಕಾರ ನೀಡಲಾಗುವದು ಎಂದರು.
ಪಂ.ಪುಟ್ಟರಾಜ ಕವಿ ಗವಾಯಿಗಳ ಸ್ಮಾರಕ ಭವನ ನಿರ್ಮಾಣಕ್ಕೆ ಬೇಕಾದಂತಹ ಅನುದಾನವನ್ನು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಾಧ್ಯವಾದಷ್ಟು ಅನುದಾನವನ್ನು ಒದಗಿಸಿ ಸ್ಮಾರಕ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಕಾನೂನು ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ.ಪಾಟೀಲ ಅವರು ಮಾತನಾಡಿ, ಗದುಗಿಗೆ ಇಂದು ಸಂತೋಷದ ದಿನವಾಗಿದೆ. ನಾವೆಲ್ಲ ಅಭಿಮಾನ ಪಡುವ ರೀತಿಯಲ್ಲಿ ಭಾರತರತ್ನ ಪಂ.ಭೀಮಸೇನ್ ಜೋಶಿಯವರ ಹೆಸರಿನಲ್ಲಿ ಪ್ರಾರಂಭವಾಗಿರುವ ರಂಗಮಂದಿರ ಉತ್ತಮ ಗುಣಮಟ್ಟದೊಂದಿಗೆ ಅಂತರಾಷ್ಟ್ರೀಯ ಮಟ್ಟದ ರಂಗ ಮಂದಿರ ಇದಾಗಿದೆ ಎಂದರು.
ಈ ಭವ್ಯ ರಂಗ ಮಂದಿರಕ್ಕೆ ಭೀಮಸೇನ್ ಜೋಶಿ ಎಂದು ನಾಮಕರಣ ಮಾಡಲು ಎಲ್ಲ ಅಧಿಕಾರಿಗಳು ತುಂಬ ಸಹಕಾರ ನೀಡಿರುತ್ತಾರೆ. ದೇಶದಲ್ಲಿ ಸಂಗೀತ ಕ್ಷೇತ್ರದಲ್ಲಿ ಎಕೈಕ ಭಾರತ ರತ್ನ ಪಡೆದಿರುವದು ಅದು ಗದುಗಿನ ಪಂ.ಭೀಮಸೇನ್ ಜೋಶಿ ಎಂಬುದು ಹೆಮ್ಮೆಯ ವಿಷಯವಾಗಿದೆ. ವರ್ಷದಲ್ಲಿ ಸರಕಾರಿ ಪೋಷಿತ ಇಪ್ಪತ್ತೈದು ಕಾರ್ಯಕ್ರಮಗಳು ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಲ್ಲಿ ಮನವಿ ಮಾಡಿದರು.
ಈ ಹಿಂದೆ ಕನ್ನಡ ಮತ್ತು ಸಂಸೃತಿ ಇಲಾಖೆಯೊಂದಿಗೆ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೂರು ಕಾರ್ಯಕ್ರಮಗಳ ಗುರಿಯಲ್ಲಿ ಎಂಭತ್ತೈದು ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ಪುಟ್ಟರಾಜ ಗವಾಯಿಗಳ ಸ್ಮಾರಕವಾಗಿ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದ್ದು ಅದಕ್ಕೆ ಬೇಕಾದಂತಹ ಅನುದಾನ ಒದಗಿಸಿದಲ್ಲಿ ಅದನ್ನು ಕೂಡಾ ಶೀಘ್ರವೇ ಲೋಕಾರ್ಪಣೆ ಮಾಡಲಾಗುವದು ಎಂದರು.
ಹಂಪಿಯಷ್ಠೆ ಶ್ರೇಷ್ಠವಾದ ಸ್ಮಾರಕ ಲಕ್ಕುಂಡಿ ನಮ್ಮಲ್ಲಿದ್ದು ಇದರ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಭೆಗಳು ದೊರೆಯುತ್ತವೆ. ಈ ನಾಡು ಪ್ರವಾಸೊದ್ಯಮದ ನಾಡಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನ್ಮುಕವಾಗಬೇಕು. ಇಂದಿನ ಯುವಕರು ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಸಾಕಷ್ಟು ಸಂಸ್ಕೃತ ಭವನಗಳು ನಿರ್ಮಾಣಗೊಂಡಿದ್ದು ಅದರಲ್ಲಿ ಇದೊಂದು ವಿಶೇಷ ರಂಗಮಂದಿರವಾಗಿದೆ. ಇವೆಲ್ಲಗಳ ನಿರ್ಮಾಣಕ್ಕೆ ಸಾಕಷ್ಟು ಆಯಾಸ ಪಟ್ಟಿದ್ದು ಇದರಿಂದ ಸುಧಾರಿಸಿಕೊಳ್ಳಲು ಅನುದಾನ ನೀಡಿ ನಮ್ಮಕೈ ಹಿಡಿಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಲ್ಲಿ ನಗೆ ಚಟಾಕಿ ಹಾರಿಸುತ್ತಾ ಮನವಿ ಮಾಡಿದರು.
ಈ ಭವ್ಯ ರಂಗ ಮಂದಿರ ಇಂದು ನಿಗದಿತ ಸಮಯದೊಳಗಾಗಿ ಉದ್ಘಾಟನೆಗೊಳ್ಳಲು ತಮ್ಮನ್ನು ತಾವು ತೊಡಗಿಸಿಕೊಂಡಂತಹ ಎಲ್ಲ ಅಧಿಕಾರಿ, ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಗಳನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಜನಕೂಡ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಮನಸ್ಸಿಗೆ ಮುದ ನೀಡುವಂತಹ ಸಂಗೀತ ಈ ಕಟ್ಟಡದಿಂದ ಬರುವ ಮೂಲಕ ಇಲ್ಲಿಯ ಕಲಾವಿದರು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವಂತಹ ಕಾರ್ಯವಾಗಲಿ ಎಂದು ಸಚಿವ ಡಾ. ಎಚ್ ಕೆ ಪಾಟೀಲ ಶುಭ ಹಾರೈಸಿದರು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ರಾಜ್ಯ ವಿಧಾನಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಅವರು ವಹಿಸಿ ಮಾತನಾಡಿ, ರಂಗ ಮಂದಿರಕ್ಕೆ ಪಂ. ಭೀಮಸೇನ ಜೋಷಿ ಹೆಸರು ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದರು. ಗದಗ ಜಿಲ್ಲೆಯ ಇತಿಹಾಸ ಹಾಗೂ ಪ್ರಸಿದ್ದಿಯನ್ನು ಅಳಿಯದಂತೆ ಉಳಿಸಲು ಒಂದು ಪುಸ್ತಕ ರೂಪದಲ್ಲಿ ಹೊರ ತರಬೇಕೇಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರ ಹೆಬ್ಬಯಕೆಯಂತೆ ಸುಸಜ್ಜಿತ ಹಾಗೂ ಭವ್ಯವಾದ ಜಿಲ್ಲಾ ರಂಗಮಂದಿರ ನಿರ್ಮಾಣಗೊಂಡಿದೆ. 582 ಆಸನಗಳುಳ್ಳ ಅತ್ಯಾಧುನಿಕ ತಂತ್ರಜ್ಞಾನದ ಸೌಂಡ ಸಿಸ್ಟಮದೊಂದಿಗೆ ನಿರ್ಮಾಣಗೊಂಡಿರುವ ಈ ರಂಗ ಮಂದಿರ ಜಿಲ್ಲೆಯ ಹೆಮ್ಮೆ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೆಶಕ ವಿಶ್ವನಾಥ ಹಿರೇಮಠ , ಖ್ಯಾತ ಕೊಳಲು ವಾದಕ ರಾಕೇಶ ಚೌರಾಸಿಯಾ, ಖ್ಯಾತ ತಬಲಾ ವಾದಕ ಪದ್ಮಶ್ರೀ.ಪಂ.ವಿಜಯ ಘಾಟೆ, ಖ್ಯಾತ ಹಿಂದೂಸ್ಥಾನಿ ಗಾಯಕರಾದ ಪದ್ಮಶ್ರೀ ವೆಂಕಟೇಶಕುಮಾರ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ,
ನಗರ ಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ಸುಶೀಲೆಂದ್ರ ಜೋಶಿ, ಅರವಿಂದ ಹುಯಿಲಗೊಳ, ನಿರ್ಮಿತಿ ಕೇಂದ್ರದ ಪಿ.ಡಿ. ಶಿರೋಳ ಸೇರಿದಂತೆ ಗಣ್ಯರು, ಸಾರ್ವಕನಿಕರು, ಸಂಗೀತ ಆಸಕ್ತರು ಹಾಜರಿದ್ದರು. ವೆಂಕಟೇಶ ಅಲಕೋಡ ಹಾಗೂ ತಂಡದವರು ನಾಡಗೀತೆ ಪ್ರಚುರ ಪಡಿಸಿದರು. ದತ್ತಪ್ರಸನ್ನ ಪಾಟೀಲ ಹಾಗೂ ಕು.ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಭವ್ಯ ರಂಗಮಂದಿರ ಸುಂದರ ಹಾಗೂ ಅಚ್ಚುಕಟ್ಟಾಗಿ ನಿರ್ಮಾಣವಾಗಲು ಕಾರ್ಯನಿರ್ವಹಿಸಿದ ಅಧಿಕಾರಿ, ತಾಂತ್ರಿಕ ವರ್ಗದವರನ್ನು ಸನ್ಮಾನಿಸಲಾಯಿತು.
Post a Comment